ನಾವು ಎಂದಿಗೂ ವೋಟ್ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ ಎಂದು ಪ್ರಧಾನಿ ಮೋದಿ (Modi) ಸ್ಪಷ್ಟಪಡಿಸಿದ್ದಾರೆ. ಯಾದಗಿರಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ.
ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಕ್ಷೇತ್ರವು ಅಭಿವೃದ್ಧಿ ಯಾತ್ರೆಯಲ್ಲಿ ಬಹಳ ಹಿಂದೆ ಬಿದ್ದಿತ್ತು. ಹಿಂದೆ ಇದ್ದ ಸರ್ಕಾರಗಳು ಯಾದಗಿರಿ (Yadagiri) ಯಂಥ ಹಲವು ಜಿಲ್ಲೆಗಳನ್ನು ಹಿಂದುಳಿದಿವೆ ಎಂದು ಘೋಷಿಸಿ ಕೈತೊಳೆದುಕೊಂಡಿದ್ದವು. ಆದರೆ ನಾವು ಹಾಗಲ್ಲ. ಈ ಜಿಲ್ಲೆಗಳು ಹಿಂದುಳಿದಿರುವ ಕಾರಣಗಳನ್ನು ಹುಡುಕಿ, ಪರಿಹರಿಸಲು ಯತ್ನಿಸಿದೆವು. ಆದರೆ ಹಿಂದಿದ್ದವರು ಅವನ್ನು ಹುಡುಕಲು ಸಮಯ ಕೊಡಲೇ ಇಲ್ಲ. ರಸ್ತೆ, ವಿದ್ಯುತ್, ನೀರಿನಂಥ ಸೌಕರ್ಯ ಒದಗಿಸಲು ಹಿಂದಿನ ಸರ್ಕಾರಗಳು ವಿಫಲವಾದವು. ಅವರು ಮತಬ್ಯಾಂಕ್ ರಾಜಕಾರಣಕ್ಕೇ ಒತ್ತು ಕೊಟ್ಟರು. ಜಾತಿ, ಮತಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರು ಎಂದು ಗುಡುಗಿದ್ರು.
ಕರ್ನಾಟಕ (Karnataka) ದಲ್ಲಿಂದು ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ನಾರಾಯಣಪುರ ಎಡದಂಡೆ ಯೋಜನೆ (Scheme) ಯ ವಿಸ್ತರಣೆ, ಆಧುನೀಕರಣಗೊಳಿಸಲಾಗಿದೆ. ಇದರಿಂದ ಮೂರು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೇರ ಲಾಭವಾಗಲಿದೆ. ಯಾದರಿಗಿಯ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ಸೂರತ್-ಚೆನ್ನೈ ಎಕನಾಮಿಕ್ ಕಾರಿಡರ್ನ ಕರ್ನಾಟಕದ ಭಾಗದ ಕೆಲಸವು ಇಂದಿನಿಂದ ಆರಂಭವಾಗಲಿದೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಜನಜೀವನ ಸುಧಾರಿಸಲಿದೆ. ಉದ್ಯಮಗಳು ಹೆಚ್ಚಾಗಲಿವೆ ಎಂದು ಮೋದಿ ಹೇಳಿದರು.
ಉತ್ತರ ಕರ್ನಾಟಕ ( Uttara karnataka) ದ ಅಭಿವೃದ್ಧಿಗೆ ಆಗುತ್ತಿರುವ ಕೆಲಸಗಳು ಶ್ಲಾಘನೀಯ. ಇದಕ್ಕಾಗಿ ಸಿಎಂ ಬೊಮ್ಮಾಯಿ ಮತ್ತು ಅವರ ಸಚಿವರನ್ನು ಅಭಿನಂದಿಸುತ್ತೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಮುಂದಿನ 25 ವರ್ಷಗಳ ಕನಸು ಹೊತ್ತು ನಾವು ಮುನ್ನಡೆಯುತ್ತಿದ್ದೇವೆ. ಇದು ನಮಗೆಲ್ಲರಿಗೂ ಅಮೃತ ಕಾಲ. ಈ ಅಮೃತ ಕಾಲದಲ್ಲಿ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಿದೆ. ಭಾರತದ ಎಲ್ಲ ನಾಗರಿಕರಿಗೆ, ಕುಟುಂಬಗಳಿಗೆ, ರಾಜ್ಯಗಳು ಅಭಿಯಾನದ ಭಾಗವಾದಾಗ ಮಾತ್ರ ಭಾರತ ವಿಕಸಿತವಾಗಲಿದೆ. ರೈತರು (Farmers) , ಕಾರ್ಮಿಕರು ಮತ್ತು ಎಲ್ಲರ ಬದುಕು ಸುಧಾರಿಸಿದಾಗ ಮಾತ್ರ ಭಾರತ ವಿಕಸಿತವಾಗಲಿದೆ. ಕೃಷಿಯಲ್ಲಿ ಫಸಲು ಚೆನ್ನಾಗಿ ಬರಬೇಕು, ಕೈಗಾರಿಕೆಯಲ್ಲಿ ಉತ್ಪಾದನೆ ಚೆನ್ನಾಗಿ ಆಗಬೇಕು. ಆಗಷ್ಟೇ ಭಾರತ ವಿಕಸಿತವಾಗಲಿದೆ ಎಂದರು.
ಇದನ್ನು ಓದಿ :- ರಾಜಧಾನಿಯಲ್ಲಿ 2ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ