ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಸಾಮಾನ್ಯವಾಗಿದೆ. ಮುಂಚೆ ನಾಯಿ, ಬೆಕ್ಕುಗಳನ್ನು ದುಷ್ಟರಿಂದ ಕಾಪಾಡಿಕೊಳ್ಳಲು ತಮ್ಮ ತಮ್ಮ ಮನೆಯಲ್ಲಿ ಸಾಕುತ್ತಿದ್ದರು. ಆದರೀಗ ಪ್ರತಿ ಮನಗಳಲ್ಲಿ ಸ್ನೇಹಿತರು ಇರುವುದಕ್ಕಿಂತ ಹೆಚ್ಚಾಗಿ ಜನರು ತಮ್ಮ ಮನಸ್ಸಿನಲ್ಲಿ ತಾವು ಸಾಕಿದ ನಾಯಿ, ಬೆಕ್ಕುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಯಾಕಂದ್ರೆ, ತಾವು ಸಾಕಿದ ಪ್ರಾಣಿಗಳು ಮನುಷ್ಯರ ಹಾಗೆ ಮೋಸ ಮಾಡುವುದಿಲ್ಲ, ನೀಯತ್ತಿನಲ್ಲಿ ಪ್ರೀತಿಗೆ ಪ್ರೀತಿಯನ್ನೇ ಕೊಡುತ್ತವೆ. ಹಾಗಾಗಿ ಇತ್ತೀಚಿನ ದಿನಮಾನಗಳಲ್ಲಿ ನಾಯಿ, ಬೆಕ್ಕು ಎನ್ನುವ ಪ್ರಾಣಿಗಳು ಕೇವಲ ಪ್ರಾಣಿಗಳಾಗಿರದೆ, ಮನೆಯ ಸದಸ್ಯರ ಸ್ಥಾನವನ್ನ ಪಡೆದಿರುವುದು ನಿಜಕ್ಕೂ ಮೆಚ್ಚುಗೆಯ ಕೆಲಸವಾಗಿದೆ.
ಆ ಪ್ರಾಣಿಗಳಿಗಾಗಿಯೇ ವಿವಿಧ ರೀತಿಯ ಖಾದ್ಯಗಳನ್ನು, ಬಟ್ಟೆಗಳನ್ನು, ಆಟಿಕೆಗಳನ್ನು ತಂದುಕೊಟ್ಟು ಅವು ಸಂತಸದಿಂದ ಕಾಲ ಕಳೆಯುವುದನ್ನು ನೋಡಿ ಸಂಭ್ರಮ ಪಡುವುದು ಸರ್ವೇಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ ಆ ನಾಯಿ ಅಥವಾ ಬೆಕ್ಕಿನ ಹುಟ್ಟಿದ ದಿನವನ್ನು ನೆನಪಿನಲ್ಲಿಟ್ಟುಕೊಂಡು ಜನ್ಮದಿನವನ್ನೂ ಆಚರಿಸುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿ ಭಾಸವಾಗುತ್ತಿದೆ. ಸಾಕು ಪ್ರಾಣಿಗಳು ಮನಸ್ಸಿನ ಒತ್ತಡವನ್ನು ಕಳೆದು ಚೇತೋಹಾರಿಯಾಗಿಸುತ್ತದೆ. ಅದಕ್ಕೆ ಅನೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ದಿನದ 6-7 ಗಂಟೆಗಳ ಕಾಲ ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ವಾಪಸ್ಸಾದ ಕೂಡಲೇ ನಿಮ್ಮ ನೆಚ್ಚಿನ ಸಾಕು ನಾಯಿ ನಿಮ್ಮ ಮೈ ಮೇಲೆ ಎರಗಬಹುದು.
ಸಾಕು ನಾಯಿ ಎಷ್ಟೇ ಮುದ್ದಿನ ಪ್ರಾಣಿಯಾದರೂ ಅವುಗಳನ್ನು ಮುದ್ದಿಸುವಾಗ ತುಸು ಎಚ್ಚರಿಕೆ ಅಗತ್ಯ. ತೀರಾ ಅವುಗಳ ನಾಲಿಗೆ ಅಥವಾ ಬಾಯಿಯ ಜೊಲ್ಲು ಇವುಗಳಿಂದ ನಿಮಗೆ ಗಂಭೀರ ರೋಗ ಹರಡಬಹುದು. ಅದಕ್ಕಾಗಿ ನಿಮ್ಮ ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು, ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಅಗತ್ಯ. ನಿಮ್ಮ ಮಕ್ಕಳ ಕೈ ಕಾಲುಗಳ ಮೇಲೆ ಅಕಸ್ಮಾತ್ ಗಾಯಗಳಾಗಿದ್ದು ಅವುಗಳ ಮೇಲೆ ನಾಯಿ ನೆಕ್ಕಿ ಅಥವಾ ಜೊಲ್ಲು ಸುರಿಸಿದ್ದರೆ ತಕ್ಷಣ ಜಾಗೃತರಾಗಿ. ಸ್ವಚ್ಚ ನೀರಿನಿಂದ ಚೆನ್ನಾಗಿ ಗಾಯ ತೊಳೆದು ನಂತರ ಸೂಕ್ತ ಔಷಧಿ ಹಚ್ಚಿ. ಇಲ್ಲವಾದರೆ ಮಗು ಬಹಳ ಬೇಗ ಗಂಭೀರ ಸಮಸ್ಯೆ ಎದುರಿಸಬಹುದು. ಹಾಗಾಗಿ ಎಷ್ಟೇ ಮುದ್ದಿನ ಪ್ರಾಣಿಯಾದರೂ ಒಂದು ಚಿಕ್ಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ.