ಚಳಿಗಾಲದ ಬೆಳಗು ಅತ್ಯಂತ ಸುಂದರ. ಪ್ರಖರ ಸೂರ್ಯನ ಬೆಳಕು, ಫಳ ಫಳ ಹೊಳೆಯುವ ಮಂಜಿನ ಹನಿಗಳು, ಒದ್ದೆ ಮುದ್ದೆಯಾದ ಹುಲ್ಲು ಹಾಸಿನ ನೆಲ ಜೊತೆಗೆ ಘಮಘಮಿಸುವ ಚಹಾ ಇದ್ರೆ ಸ್ವರ್ಗವೇ ಸರಿ. ಆದ್ರೆ ಚಳಿಗಾಲದಲ್ಲಿ ಸೌಂದರ್ಯ ಕಾಪಾಡಿಕೊಳ್ಳೋದು ನಿಜಕ್ಕೂ ಸವಾಲಿನ ಕೆಲಸ. ಅದರಲ್ಲೂ ಕೂದಲು ಉದುರುವುದನ್ನು ತಡೆಯೋದು ಹೇಗೆ ಅನ್ನೋದು ಬಹುತೇಕರನ್ನು ಕಾಡುವ ಸಮಸ್ಯೆ. ಆದ್ರೆ ಒಂದು ಚಮತ್ಕಾರಿ ನೈಸರ್ಗಿಕ ವಸ್ತುವಿನಿಂದ ಕೂದಲು ಉದುರುವುದನ್ನು ತಡೆಯಬಹುದು. ಅದೇ ಪೇರಲ ಎಲೆ, ನಿಮ್ಮ ಕೂದಲಿನ ಸೌಂದರ್ಯವರ್ಧಕ.
ಕೂದಲಿಗೆ ಅಗತ್ಯವಾದ ಪೋಷಕಾಂಶ….
ಪೇರಲ ಪೋಷಕಾಂಶಭರಿತ ಹಣ್ಣು, ಪೇರಲ ಎಲೆಗಳಲ್ಲಿ ಕೂಡ ನಿಮ್ಮ ಕೂದಲಿಗೆ ಬೇಕಾದ ವಿಟಮಿನ್ ಬಿ ಮತ್ತು ಸಿ ಹೇರಳವಾಗಿದೆ. ಇದೊಂದು ಪುರಾತನ ಸೌಂದರ್ಯ ಚಿಕಿತ್ಸೆ. ಮೆಕ್ಸಿಕೋ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಪ್ರಾಚೀನ ಕಾಲದಿಂದ್ಲೂ ಪೇರಲ ಎಲೆಯನ್ನು ಸೌಂದರ್ಯವರ್ಧಕವಾಗಿ ಬಳಸುತ್ತಿದ್ದಾರೆ.
ಪೇರಲ ಎಲೆ ಬಳಸುವುದು ಹೇಗೆ?
ಪ್ರತಿ ದಿನ ಪೇರಲ ಎಲೆಗಳ ಚಹಾ ಅಥವಾ ಕಷಾಯ ತಯಾರಿಸಿಕೊಂಡು ಕುಡಿಯಿರಿ. ಇಲ್ಲವಾದಲ್ಲಿ ಎಲೆಗಳ ಲೋಶನ್ ತಯಾರಿಸಿ ಅದನ್ನು ನಿಮ್ಮ ನೆತ್ತಿ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಇದ್ರಿಂದ ಕೂದಲು ಉದುರುವುದನ್ನು ತಡೆಯಬಹುದು ಜೊತೆಗೆ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಇದಕ್ಕೆ ನಿಮಗೆ ಬೇಕಾಗಿರೋದು ಇಷ್ಟೇ ಮುಷ್ಟಿ ತುಂಬಾ ಪೇರಲ ಎಲೆ ಹಾಗೂ ಒಂದು ಲೀಟರ್ ನೀರು. ಪೇರಲ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ 20 ನಿಮಿಷಗಳ ಕಾಲ ಕುದಿಸಿ. ಅದು ಸಂಪೂರ್ಣ ತಣ್ಣಗಾದ ಮೇಲೆ ಬಳಸಬೇಕು. ತಲೆ ಸ್ನಾನ ಮಾಡಿದ ನಂತರವೇ ಬಳಸುವುದು ಉತ್ತಮ.
ತಲೆಸ್ನಾನದ ಬಳಿಕ ಕೂದಲು ಸಂಪೂರ್ಣ ಒಣಗಿದ ಮೇಲೆ ನೀವು ತಯಾರಿಸಿದ ಪೇರಲ ಎಲೆಯ ಲೋಶನ್ ಅನ್ನು ಹಚ್ಚಿಕೊಂಡು ಮಸಾಜ್ ಮಾಡಿ. 10 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸುಲಲಿತವಾಗುತ್ತದೆ. ಕೂದಲಿನ ಬೇರು ಮತ್ತು ತುದಿಯ ಬಗ್ಗೆ ಹೆಚ್ಚು ಗಮನವಿರಲಿ. ಲೋಶನ್ ಹಚ್ಚಿಕೊಂಡ ಮೇಲೆ 2 ಗಂಟೆಗಳ ಕಾಲ ಹಾಗೇ ಬಿಡಬೇಕು. ಅಗತ್ಯವೆನಿಸಿದರೆ ತಲೆಗೆ ಟವೆಲ್ ಕಟ್ಟಿಕೊಳ್ಳಬಹುದು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆದುಕೊಳ್ಳಿ, ಬಿಸಿ ನೀರು ಬೇಡ. ಯಾಕೆಂದರೆ ನಿಮ್ಮ ಕೂದಲು ಹಾಗೂ ನೆತ್ತಿ ಒರಟಾಗುತ್ತದೆ. ವಾರಕ್ಕೆ 3 ಬಾರಿ ಈ ರೀತಿ ಮಾಡಿದರೆ ನಿಮ್ಮ ಕೂದಲ ಸಮಸ್ಯೆ ಮಾಯವಾಗುತ್ತದೆ. ಹೊಳೆಯುವ ಸುಂದರ ಕೂದಲು ನಿಮ್ಮದಾಗುತ್ತದೆ.