ಮಳೆಗಾಲದಲ್ಲಿ ಪ್ರಕೃತಿಯಲ್ಲಾಗುವ ಈ ಮಳೆ, ತಂಪುಗಾಳಿಯಂತಹ ಬದಲಾವಣೆಗಳು ಮನುಷ್ಯನ ದೇಹಕ್ಕೆ ಹೊಸ ಉಲ್ಲಾಸ ಕೊಡುತ್ತದೆ, ಮನಸ್ಸಿಗೂ ಹಿತವೆನಿಸುತ್ತದೆ. ಆದರೆ ಹಲವು ರೋಗಗಳು ಹರಡುವುದಕ್ಕೂ ಸಹ ಈ ತಂಪುಗಾಳಿ ಮಳೆಯು ಕಾರಣವಾಗುತ್ತದೆ. ಈ ಋತುವಿನಲ್ಲಿ, ಅನೇಕ ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಪರಿಸರದಲ್ಲಿ ಬೆಳೆಯಲು ಮತ್ತು ಹರಡಲು ಪ್ರಾರಂಭಿಸುತ್ತವೆ, ಇದರಿಂದಾಗಿ ವ್ಯಕ್ತಿಯ ರೋಗನಿರೋಧಕ ಶಕ್ತಿ ಕುಂಠಿತವಾಗಿ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ನಂತರ ಆ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
ಈ ಋತುವಿನಲ್ಲಿ ಆರೋಗ್ಯವಾಗಿರಲು, ನಿಮ್ಮ ಆಹಾರದಲ್ಲಿ ಕೆಲವು ವಿಶೇಷಗಳನ್ನ ಸೇರಿಸಿಕೊಳ್ಳಬೇಕಾಗುತ್ತದೆ. ಹೌದು, ಆಹಾರದ ಈ ವಿಶೇಷಗಳಲ್ಲಿ ಹರ್ಬಲ್ ಚಹಾ ಕೂಡ ಒಂದಾಗಿದೆ. ಮಾನ್ಸೂನ್ನಲ್ಲಿ ಈ ವಿಶೇಷ ಹರ್ಬಲ್ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಆಂಟಿವೈರಲ್ ಗುಣಲಕ್ಷಣಗಳು ದೇಹವನ್ನು ಆರೋಗ್ಯವಾಗಿಡಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ಟ್ರೈ ಮಾಡಿ ಸವಿಯಿರಿ ಈ ಹರ್ಬಲ್ ಚಹಾವನ್ನು…
ಹರ್ಬಲ್ ಟೀ ತಯಾರಿಸಲು ಬೇಕಾಗುವ ಪದಾರ್ಥಗಳು :
- ನಿಂಬೆ ಹುಲ್ಲು
- ಶುಂಠಿ
- ನಿಂಬೆ
- ತುಳಸಿ
- ಏಲಕ್ಕಿ
- ಜೇನು
- ಲವಂಗ
ಹರ್ಬಲ್ ಟೀ ಮಾಡುವ ಸುಲಭ ವಿಧಾನ :
ಹರ್ಬಲ್ ಟೀ ತಯಾರಿಸಲು, ಮೊದಲು ನೀವು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಳ್ಳಿ ನಂತರ ಅದರಲ್ಲಿ ಎಲ್ಲಾ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಮಿಶ್ರಣ ಮಾಡಬೇಕು. ನೀರಿನ ಬಣ್ಣ ಬದಲಾಗುವವರೆಗೆ ನೀರು ಕುದಿಯಲು ಬಿಡಿ. ನೀರು ಕುದಿಯುವ ನಂತರ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ, ಗ್ಯಾಸ್ ಆಫ್ ಮಾಡಿ. ಈಗ ಒಂದು ಕಪ್ನಲ್ಲಿ ಹರ್ಬಲ್ ನೀರನ್ನ ಸೋಸಿ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಿರಿ. ನಿಮ್ಮ ಆರೋಗ್ಯವು ನೀವು ಸೇವಿಸುವ ಆಹಾರದಲ್ಲಡಗಿದೆ. ಮನೆಯಲ್ಲೇ ರುಚಿಯಾದ, ಆರೋಗ್ಯಕ್ಕೆ ಒಳಿತಾದ ಆಹಾರ ತಯಾರಿಸಿ ಆರೋಗ್ಯ ಕಾಪಾಡಿಕೊಳ್ಳಿ…