ಹೆಲ್ತ್ ಟಿಪ್ಸ್ : ಮಳೆಗಾಲ ಶುರುವಾಗಿರುವುದರಿಂದ ಮನೆಯ ಅಕ್ಕ ಪಕ್ಕ, ರಸ್ತೆಯ ಪಕ್ಕದಲ್ಲಿ, ಮಳೆಯ ನೀರು ನಿಂತು ನೀರಿನಲ್ಲಿ ರಸ್ತೆಯ ಅಕ್ಕ ಪಕ್ಕ ಬಿಸಾಡುವ ಚಿಂದಿ ಪೇಪರ್, ಹಸಿಯಾದ ತ್ಯಾಜ್ಯಗಳೆಲ್ಲವೂ ನಿಂತಿರುವ ಈ ಮಳೆನೀರಿನಲ್ಲಿ ಸೇರಿ ದುರ್ವಾಸನೆ ಬರುತ್ತಿರುತ್ತದೆ. ಇಷ್ಟೇ ಅಲ್ಲದೇ ಆ ನೀರಿನಿಂದ ಅನೇಕ ಕೀಟಾಣುಗಳು ಉತ್ಪತ್ತಿಯಾಗಿ ರೋಗ ರುಜಿನಗಳಿಗೆ ದಾರಿಯಾಗುತ್ತವೆ. ಮಳೆಗಾಲದಲ್ಲಿ ಮನೆಗೆ ದಾಳಿ ಇಟ್ಟು, ಕಾಟ ಕೊಡುವ ಸೊಳ್ಳೆಗಳು ಹಾಗೂ ಇತರೆ ಕೀಟಗಳ ನಿಯಂತ್ರಣಕ್ಕೆ ಇಲ್ಲಿದೆ ಮನೆ ಮದ್ದು…
ಹೌದು…! ಮಳೆಗಾಲ ಶುರುವಾಗಿರುವುದರಿಂದ ಮನೆಯ ಅಕ್ಕ ಪಕ್ಕದಲ್ಲಿ ಮಳೆಯ ನೀರು ನಿಂತು ಉತ್ಪತ್ತಿಯಾಗುವ ಸೊಳ್ಳೆಗಳು, ಸಣ್ಣ ಸಣ್ಣ ಕ್ರಿಮಿ ಕೀಟಗಳ ಹಾವಳಿ ಹೆಚ್ಚಾಗುತ್ತಿದೆ. ಈ ಕೀಟಗಳಿಂದ ತಪ್ಪಿಸಿಕೊಳ್ಳುವುದು ಹೇಗೆ…? ಹಾಗೂ ಈ ಕೀಟಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಏನು…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…
ಮಳೆಗಾಲ ಶುರುವಾದ್ರೆ ಸಾಕು ಸೊಳ್ಳೆ, ಕೀಟಗಳ ಹಾವಳಿ ಬಿಟ್ಟು ಬಿಡದಂತೆ ಕಾಡೋದಕ್ಕೆ ಶುರುವಾಗುತ್ತದೆ. ಧೋ ಎಂದು ಸುರಿಯುವ ಮಳೆಗೆ ನೀರಿನ ಜೊತೆಗೆ ಈ ಕೀಟಗಳು ಕೂಡ ಮನೆ ಒಳಗಡೆ ಬಂದು ಕಾಟ ಕೊಡುತ್ತಿರುತ್ತವೆ. ಮಳೆಗಾಲದಲ್ಲಿ ಕತ್ತಲಾದ್ರೆ ಸಾಕು ಸೊಳ್ಳೆಗಳು ಮನೆಯೊಳಗೆ ದಾಳಿ ಇಟ್ಟು, ಕಚ್ಚಿ, ಕಚ್ಚಿ, ರಕ್ತ ಹೀರೋ ಕೆಲಸ ಶುರು ಮಾಡುತ್ತವೆ. ಇಷ್ಟೇ ಅಲ್ಲದೇ, ದೀಪಗಳ ಸುತ್ತ ಹಾರಾಡುತ್ತಾ ಕಿರಿಕಿರಿ ಮಾಡುತ್ತವೆ. ಹೀಗೆ ಒಂದಾ? ಎರಡಾ? ಸಾಲು ಸಾಲು ಸಮಸ್ಯೆಗಳು ತಂದಿಡುತ್ತವೆ ಈ ಕೀಟಗಳು. ಇದರ ಜೊತೆಗೆ ಕೀಟ ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯ ಕೂಡ ಹೆಚ್ಚಿದೆ. ಮಳೆಗಾಲದಲ್ಲಿ ಇಷ್ಟೆಲ್ಲಾ ತೊಂದರೆ ಕೊಡುವ ಸೊಳ್ಳೆಗಳಿಂದ ಹಾಗೂ ಕೀಟಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಇವುಗಳಿಂದ ತಪ್ಪಿಸಿಕೊಳ್ಳಲು ಈ ಮನೆ ಮದ್ದನ್ನು ಬಳಸಿ.
- ನಿಂಬೆ ಹಣ್ಣು ಮತ್ತು ಅಡುಗೆ ಸೋಡಾದ ದ್ರಾವಣ :
ಮಳೆಗಾಲದಲ್ಲಿ ಕೀಟಗಳನ್ನು ಮನೆಯಿಂದ ದೂರವಿಡಲು ಮನೆಯಲ್ಲಿಯೇ ನಿಂಬೆ ಮತ್ತು ಅಡಿಗೆ ಸೋಡಾದ ದ್ರಾವಣವನ್ನು ತಯಾರಿಸಿ ಅದರ ಮೇಲೆ ಸಿಂಪಡಣೆ ಮಾಡಿದರೆ ಸಾಕು ಓಡಿ ಹೋಗುತ್ತವೆ. ದ್ರಾವಣವನ್ನು ಮಾಡುವ ವಿಧಾನ ಹೇಗೆಂದರೆ, ಮೊದಲು ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಎರಡು ನಿಂಬೆ ಹಣ್ಣುಗಳನ್ನು ಹಿಂಡಿ. ಮತ್ತು ಅದಕ್ಕೆ ಅಡುಗೆ ಸೋಡಾವನ್ನು ಸೇರಿಸಿ. ಆ ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೀಟಗಳ ಮೇಲೆ ಸಿಂಪಡಣೆ ಮಾಡಿ. ಎಲ್ಲಾ ಕೀಟ ಮತ್ತು ಸೊಳ್ಳೆಗಳು ಕೆಲವೇ ನಿಮಿಷಗಳಲ್ಲಿ ಓಡಿ ಹೋಗುತ್ತವೆ.
- ಕರಿಮೆಣಸು :
ಒಂದು ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ಒಂದು ಕಪ್ ನೀರನ್ನು ತುಂಬಿಸಿ. ನಂತರ ಅದಕ್ಕೆ ಎರಡು ಚಮಚ ತಾಜಾ ಕರಿಮೆಣಸಿನ ಪುಡಿಯನ್ನು ಹಾಕಿ ಮಿಶ್ರಣವನ್ನು ಕಲುಕಿಸಿ, ಆನಂತರ ಕೀಟಗಳು ಇರುವ ಸ್ಥಳದಲ್ಲಿ ಚೆನ್ನಾಗಿ ಸಿಂಪಡಣೆ ಮಾಡಿ. ಕೀಟಗಳು ಕೆಲವೇ ಕ್ಷಣಗಳಲ್ಲಿ ಮಾಯವಾಗುತ್ತವೆ.
- ಲ್ಯಾವೆಂಡರ್ ಎಣ್ಣೆ :
ಮಳೆಗಾಲದಲ್ಲಿ ಕಾಟ ಕೊಡುವ ಕೀಟಗಳನ್ನು ದೂರವಿಡಲು ಲ್ಯಾವೆಂಡರ್ ಎಣ್ಣೆಯನ್ನು ಬಳಸಿ ನೋಡಿ. ಲ್ಯಾವೆಂಡರ್ ಎಣ್ಣೆಯನ್ನು ಹಲವು ವಿಧಾನಗಳಲ್ಲಿ ಬಳಸಬಹುದು. ಅದನ್ನು ಮನೆಯ ಪರದೆಗಳ ಮೇಲೆ ಸಿಂಪಡಣೆ ಮಾಡಿ. ಆಗ ಸೊಳ್ಳೆಗಳು, ಜೀ ಗುಡುವ ದ್ವಾಮಾರಿಗಳು ಪರದೆಯ ಮೇಲೆ ಗೂಡು ಕಟ್ಟುವುದಿಲ್ಲ.
- ಬೇವಿನ ಎಲೆಗಳು :
ಸಾಮಾನ್ಯವಾಗಿ ಮಳೆಗಾಲದಲ್ಲಿ ಬಲ್ಬ್ ಹಚ್ಚಿದ ತಕ್ಷಣ ಅದರ ಸುತ್ತ ಕೀಟಗಳು ಹಾರಲು ಪ್ರಾರಂಭಿಸುತ್ತದೆ. ಹೀಗಾಗಿ ಬಲ್ಬ್ ಬಳಸುವ ಮೊದಲು ಬೇವಿನ ಕೊಂಬೆಯನ್ನು ತಂದು ಬಲ್ಬ್ ಬಳಿ ನೇತುಹಾಕಿ. ಇದರ ಎಲೆಗಳ ವಾಸನೆಗೆ ಕೀಟಗಳು ದೂರ ಹೋಗುತ್ತವೆ.
- ತುಳಸಿ ಗಿಡ :
ಮಳೆಗಾಲದಲ್ಲಿ ಸೊಳ್ಳೆಗಳು ಅಥವಾ ನೊಣಗಳನ್ನು ದೂರವಿರಿಸಲು ನೀವು ತುಳಸಿ ಗಿಡಗಳನ್ನು ಬಳಸಬಹುದು. ಇದು ನೈಸರ್ಗಿಕ ರೀತಿಯಲ್ಲಿ ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ತುಳಸಿಯು ಆರೋಗ್ಯಕರವೂ ಆಗಿದ್ದು, ಇದರಿಂದ ಅನೇಕ ಪ್ರಯೋಜನಗಳು ಕೂಡ ಇದೆ.
- ಲವಂಗ, ಕರ್ಪೂರ ಬಳಸಿ :
ಮಳೆಗಾಲದ ಸಮಯದಲ್ಲಿ ಮನೆಯಲ್ಲಿ ಕಂಡು ಬರುವ ಸಣ್ಣ ಕೀಟಗಳನ್ನು ಓಡಿಸಲು ಲವಂಗದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಿ, ಅಥವಾ ಕರ್ಪೂರವನ್ನು ಉರಿಯೋದಕ್ಕೆ ಇಡುವುದರಿಂದ ಕೀಟಗಳು ಇದರ ಬಲವಾದ ವಾಸನೆಯನ್ನು ಸಹಿಸಲಾಗದೆ ಇದರ ವಾಸನೆಗೆ ಪ್ರಜ್ಞೆ ತಪ್ಪುತ್ತವೆ.
ಮಳೆಗಾಲದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಈ ಕೀಟಗಳನ್ನು ಓಡಿಸುವ ಬದಲು ಈ ರೀತಿಯ ನೈಸರ್ಗಿಕ ವಸ್ತುಗಳನ್ನು ಬಳಸಿ ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.