ಬೆಂಗಳೂರು : ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಕೆಂಗಲ್ ಹನುಮಂತಯ್ಯನವರ ಕುರಿತ ಫಲಪುಷ್ಪ ಪ್ರದರ್ಶನಕ್ಕೆ ಎರಡನೇ ದಿನವಾದ ಶನಿವಾರ ಸಾವಿರಾರು ಜನ ಆಗಮಿಸಿ ಪುಷ್ಪಗಳಿಂದ ಕಂಗೊಳಿಸಿ ವಿಧಾನಸೌಧವನ್ನು ಕಣ್ತುಂಬಿಕೊಂಡರು.
ಪ್ರದರ್ಶನದಲ್ಲಿ ಬಗೆ ಬಗೆಯ ಗುಲಾಬಿ ಹೂಗಳು, ಆಂಥೋರಿಯಂ ಹೂಗಳು, ಜರ್ಬೇರಾ, ಆರ್ಕಿಡ್, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್‌ಹಾಟ್ ಪೋಕರ್, ಆಲ್ಸ್ಟೋರೇಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧರಾಜ ಸೇರಿದಂತೆ ಶೀತ ವಲಯದ ಹೂಗಳು ಕಣ್ಮನ ಸೆಳೆಯುತ್ತಿವೆ. ನಾನಾ ಹೂವುಗಳ ಜೋಡಣೆಗಳ ಮುಂಭಾಗದಲ್ಲಿ ವೀಕ್ಷಣೆಗೆ ಬಂದಿದ್ದ ಜನತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.
ಲಾಲ್ಬಾಗ್ಗೆ ಆಗಮಿಸುವ ಜನತೆ ತಮ್ಮ ಮೊಬೈಲ್ಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳುವುದಕ್ಕೆ ಮುಗಿ ಬಿಳುತ್ತಿದ್ದಾರೆ. ಈ ಜನರನ್ನು ನಿಯಂತ್ರಣ ಮಾಡುವುದಕ್ಕಾಗಿ ತೋಟಗಾರಿಕಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಜನ ದಟ್ಟಣೆ ನಿವಾರಣೆಗಾಗಿ ಹಲವು ಸಲಹೆಗಳನ್ನು ನೀಡಲಾಗುತ್ತಿತ್ತು. ಅಲ್ಲದೆ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಗಾಜಿನ ಮನೆಯಲ್ಲಿ ನಿಂತು ಪುಷ್ಪ ಪ್ರದರ್ಶನ ವೀಕ್ಷಿಸಿ ಬೇಗೆ ಹೊರಡುವಂತೆ ತಿಳಿಸುತ್ತಿದ್ದರು.