ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನಿಭಾಯಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಭಾರತದ 2ನೇ ಜೋಡಿ ಎಂಬ ದಾಖಲೆಗೆ ಪಾತ್ರವಾಯಿತು.
ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಮತ್ತು ಧವನ್ ಜೋಡಿ 85 ರನ್ ಪೇರಿಸಿದ್ದಾಗ ಏಕದಿನ ಕ್ರಿಕೆಟ್ ನಲ್ಲಿ 5000 ರನ್ ಪೂರೈಸಿತು. ಈ ಮೂಲಕ ಭಾರತದ ಪರ ಅತೀ ಹೆಚ್ಚು ರನ್ ಪೇರಿಸಿದ 2ನೇ ಜೋಡಿ ಎಂಬ ದಾಖಲೆಗೆ ಪಾತ್ರವಾಗಿದೆ.
ಭಾರತದ ಪರ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ 8227 ರನ್ ಜೊತೆಯಾಟ ನಿಭಾಯಿಸಿ ಮೊದಲ ಸ್ಥಾನದಲ್ಲಿದ್ದಾರೆ. ಧವನ್ ಮತ್ತು ರೋಹಿತ್ ಅತೀ ಹೆಚ್ಚು ಪೇರಿಸಿದ ಜೋಡಿಗಳ ಪೈಕಿ ವಿಶ್ವದಲ್ಲಿ 7ನೇ ಸ್ಥಾನದಲ್ಲಿದ್ದಾರೆ.
ಧವನ್ ಮತ್ತು ರೋಹಿತ್ ಜೋಡಿ ಮೊದಲ ವಿಕೆಟ್ ಗೆ 103 ರನ್ ಪೂರೈಸುವ ಮೂಲಕ ಭಾರತಕ್ಕೆ ಭರ್ಜರಿ ಆರಂಭ ನೀಡಿದರು. ರೋಹಿತ್ 37 ಎಸೆತಗಳಲ್ಲಿ 6 ಬೌಂಡರಿ ಸೇರಿದ 38 ರನ್ ಗಳಿಸಿ ಔಟಾದರೆ, ಧವನ್ 44 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅಲ್ಲದೇ 51 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ 62 ರನ್ ಬಾರಿಸಿದ್ದರು.