ಪುತ್ತೂರು: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಹಿಂದೆ ಜಾಗದ ಮೋಹವಿದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿದ್ದು, ಧರ್ಮಸ್ಥಳ ಹೆಗಡೆ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇಬಾರದು. ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ತಂದೆಯೂ ಜಮೀನ್ದಾರು ಆಗಿದ್ದವರು.
ಆದರೆ ಯಾರ್ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ ಎಂದರು. ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ.ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಜಮೀನುಗಳನ್ನೇ ವಶಪಡಿಸಿಕೊಳ್ಳುತ್ತಿದ್ದಾರೆ.ಬಿಟ್ಟಿಯಾಗಿ ಜಮೀನು ಸಿಕ್ಕಿದರೆ ಆ ಪರಿವಾರಕ್ಕೆ ಭಾರೀ ಖುಷಿಯಾಗುತ್ತದೆ. ಹಣ ಕೊಟ್ಟು ಜಮೀನು ಪಡೆದಿದ್ದರೆ ಅವರಿಗೆ ಕೊಂಚ ಬಿಸಿ ತಟ್ಟುತ್ತಿತ್ತು.
ಇಂತಹ ಜಮೀನ್ದಾರಿಕೆಯನ್ನು ವಿರೋಧಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇಂತಹ ಘಟನೆಗಳನ್ನು ವಿರೋಧಿಸದ್ದಿದರೆ ನಡೆಯುತ್ತಲೇ ಇರುತ್ತದೆ. ಇದೀಗ ಸೌಜನ್ಯ ಪ್ರಕರಣವೂ ಇದೇ ಕಾರಣಕ್ಕೆ ನಡೆದಿರುವುದು. ಸೌಜನ್ಯ ಕೊಲೆ ನಡೆದಿರುವುದೂ ಜಾಗದ ವಿಚಾರಕ್ಕಾಗಿ ಎಂದು ವಸಂತ ಬಂಗೇರ ಹೇಳಿದ್ದಾರೆ. ಇದರಿಂದ ಕರಾವಳಿಯಲ್ಲಿ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ.