ಅಂಗಡಿಯ ಬಾಡಿಗೆ ಹೆಚ್ಚು ಕೊಡುವಂತೆ ಕೇಳಿದ್ದಕ್ಕಾಗಿ ಮಾಲೀಕನಿಗೆ ಬಾಡಿಗೆದಾರ ಚಾಕು ಇರಿದು ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.
ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಕೆ.ಎನ್.ಕೆ ಮ್ಯಾನಿಶನ್ ಕಟ್ಟಡ ಮಾಲೀಕ ನಾಗೇಂದ್ರ ಗುಪ್ತ ಹಲ್ಲೆಗೊಳಗಾಗಿದ್ದು, ದೇವಾಂಗ ಪೇಟೆಯ ನಿವಾಸಿ ಎಸ್.ಎಲ್.ಆರ್ ಟೆಲಿಕಾಂ ಮೊಬೈಲ್ ಅಂಗಡಿ ಮಾಲೀಕ ಮಂಜುನಾಥ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಕಳೆದ ಆರು ತಿಂಗಳಿನಿಂದ ನಾಗೇಂದ್ರ ಗುಪ್ತ ಬಾಡಿಗೆ ಹೆಚ್ಚಾಗಿ ಕೊಡುವಂತೆ ಬಾಡಿಗೆದಾರ ಮಂಜುನಾಥ್ ಗೆ ಒತ್ತಡ ಹೇರುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಂಜುನಾಥ್ ಬಾಡಿಗೆ ನೀಡುವ ನೆಪದಲ್ಲಿ ಮಾಲೀಕನ ಮನೆಯೊಳಗೆ ನುಗ್ಗಿ ನಾಗೇಂದ್ರ ಗುಪ್ತನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಚಾಕು ಇರಿತದಿಂದ ಚೀರಿಕೊಂಡ ನಾಗೇಂದ್ರ ಅಕ್ಕಪಕ್ಕದ ಜನರು ಬರುವಷ್ಟರಲ್ಲಿ ಚಾಕುವನ್ನು ಹೊಟ್ಟೆಯಲ್ಲೆ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಾಳುವನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.