ಬೆಂಗಳೂರು : ಎಸ್.ಎಸ್.ಎಲ್.ಸಿ ಅಂಕಪಟ್ಟಿ ತಿದ್ದುಪಡಿಗೆ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ SSLC ಬೋರ್ಡ್ನಿಂದ ಗುಡ್ ನ್ಯೂಸ್ ನೀಡಿದ್ದಂತಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿಆನ್ಲೈನ್ ಮೂಲಕವೇ ಮಾಡಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಎಸ್ಎಸ್ಎಲ್ಸಿ ಅಂಕಪಟ್ಟಿ ತಿದ್ದುಪಡಿ ಅರ್ಜಿ ಸಲ್ಲಿಸುವ ವಿಧಾನ :
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ, ಅಭ್ಯರ್ಥಿಗಳು ತಾವು ಅಭ್ಯಸಿಸಿದ ಶಾಲೆಯ ಶಾಲಾ ಮುಖ್ಯೋಪಾಧ್ಯಾಯರಿಗೆ ಪೂರಕ ದಾಖಲೆಗಳನ್ನು ಸಲ್ಲಿಸತಕ್ಕದ್ದು.ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಜಾಲಕಾಣದ ಶಾಲಾ ಲಾಗಿನ್ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಿಗದಿತ ಶುಲ್ಕವನ್ನು ಆನ್ಲೈನ್ ಮುಖಾಂತರ ಅಂದರೆ ಎಲ್ಲಾ ಬ್ಯಾಂಕಿನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್, ಮತ್ತು ಇಂಟರ್ನೇಟ್ ಬ್ಯಾಂಕಿಂಗ್ ಮೂಲಕ ಅಥವಾ ಈ ಸೌಲಭ್ಯ ಇಲ್ಲದವರು ಆಫ್ಲೈನ್ನಲ್ಲಿ ಪಾವತಿಸಲು, ಚಲನ್ನನ್ನು ಸದರಿ ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕ್ನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದಾಗಿರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾಹಿತಿಯು ಸಂಬಂಧಿಸಿದ ವಿಭಾಗೀಯ ಕಛೇರಿ/ಮಂಡಲಿಯ ಲಾಗಿನ್ಗೆ ಹೋಗುತ್ತದೆ. ಶಾಲಾ ಮುಖ್ಯೋಪಾಧ್ಯಾಯರು ಅಪ್ಲೋಡ್ ಮಾಡಲಾದ ಅಗತ್ಯ ದಾಖಲೆಗಳನ್ನು ವಿಭಾಗೀಯ/ಮಂಡಳಿ ಕಛೇರಿಗಳಲ್ಲಿ ನಿಯಮಾನುಸಾರ ಪರಿಶೀಲಿಸಿ,ಪ್ರಸ್ತಾವನೆಯು ತಿದ್ದುಪಡಿಗೆ ಅರ್ಹವಿದ್ದಲ್ಲಿ ಸಂಬಂಧಿಸಿದ ವಿದ್ಯಾರ್ಥಿಯ ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಛೇರಿ/ಮಂಡಲಿಗೆ ಭೌತಿಕವಾಗಿ ಕಳುಹಿಸುವಂತೆ ಮುಖ್ಯ ಶಿಕ್ಷಕರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ರವಾನಿಸಲಾಗುವುದು ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಛೇರಿ/ಮಂಡಲಿಗೆ ಸ್ವೀಕೃತವಾದ ನಂತರ ಅದನ್ನು ನಾಶಪಡಿಸಿ, ಪ್ರಸ್ತಾವನೆಯಲ್ಲಿ ಕೋರಿರುವ ತಿದ್ದುಪಡಿಗಳನ್ನು ಅಳವಡಿಸಿ ಪರಿಷ್ಕೃತ ಅಂಕಪಟ್ಟಿಯನ್ನು ಸಂಬಂಧಿಸಿದ ಶಾಲೆಗೆ ಸ್ಪೀಡ್ ಪೋಸ್ಟ್ ಮುಖಾಂತರ ರವಾನಿಸುವುದು. ಆನ್ಲೈನ್ ಮುಖಾಂತರ ಪ್ರಸ್ತಾವನೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಪ್ಲೋಡ್ ಮಾಡುವ ದಾಖಲೆಗಳನ್ನು ತಿದ್ದುಪಡಿ/ನಕಲಿ (Forged) ಮಾಡಿದಲ್ಲಿ ಅಂತಹ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.
ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಕುರಿತು ಶಾಲಾ ಹಂತದಲ್ಲಿ ಮತ್ತು ವಿಭಾಗೀಯ ಕಛೇರಿಯ ಕ್ರಮವಹಿಸುವ ಬಗ್ಗೆ ವಿವರವಾದ ನ್ನು ಈ ಸುತ್ತೋಲೆಯೊಂದಿಗೆ ಆದೇಶ ಹೊರಡಿಸಲಾಗಿದೆ. ಅದರಂತೆ ರಾಜ್ಯದ ಎಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿಭಾಗೀಯ ಕಛೇರಿ/ಮಂಡಲಿಯಲ್ಲಿ ಕ್ರಮವಹಿಸಲು SSLC ಬೋರ್ಡ್ ಇಂದ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.