ಸಾರಿಗೆ ನೌಕರರನ್ನು ಎಷ್ಟು ವಜಾ ಮಾಡುತ್ತಾರೋ ಮಾಡಲಿ, ನಾವು ಹೆದರುವುದಿಲ್ಲ. ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತೆ ಎಂದು ಸಾರಿಗೆ ನೌಕರರ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ನೌಕರರ ಸಂಘಟನೆಯ ಮುಖಂಡರ ಜೊತೆ ಸಭೆ ನಡೆಸಿದ ನಂತರ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಏನು ಮಾಡುತ್ತೋ ಮಾಡಲಿ. ನಾವು ಯಾವುದಕ್ಕೂ ಜಗ್ಗಲ್ಲ. ಸಾರಿಗೆ ನೌಕರರ 6ನೇ ಆಯೋಗ ಜಾರಿ ಮಾಡುವವರೆಗೂ ನಮ್ಮ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು.
ನಮ್ಮ ಪ್ರಧಾನಿಗಳೇ ಕೋವಿಡ್ ಇರುವಾಗ ತಟ್ಟೆ, ಲೋಟ ಬಾರಿಸಿದರು. ಸರ್ಕಾರಕ್ಕೊಂದು, ಸಾರ್ವಜನಿಕರಿಗೊಂದು ನಿಯಮ ಇದೆಯಾ? ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ಬೈ ಎಲೆಕ್ಷನ್ ಮಾಡುವ ಕೋವಿಡ್ ನಿಯಮ ಅನ್ವಯಿಸಲ್ವಾ? ರಾಜಕೀಯ ನಾಯಕರ ಭಾಷಣದಲ್ಲಿ ಸಾವಿರಾರು ಜನ ಸೇರುತ್ತಾರೆ. ಅವರಿಗೆ ಕೋವಿಡ್ ನಿಯಮ ಅನ್ವಯ ಆಗಲ್ವಾ? ಕೇವಲ ಪ್ರತಿಭಟನೆ ಮಾಡಿದರೆ ಕೊರೊನಾ ನಿಯಮ ಉಲ್ಲಂಘನೆ ಆಗುತ್ತಾ ಎಂದು ಕೋಡಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.