ವಯಸ್ಸಿಗೆ ಬರುವ ಮುನ್ನ ಪ್ರೀತಿಯ ಬಲೆಗೆ ಸಿಲುಕಿದ್ದ 17 ವರ್ಷದ ಬಾಲಕ, ಯುವತಿ ತಂದೆಯ ಕೋಪಕ್ಕೆ ಬಲಿಯಾಗಿ ಸ್ಮಶಾನ ಸೇರಿದ ಘಟನೆ ಮಂಡ್ಯದ ಕಲ್ಲಹಳ್ಳಿಯಲ್ಲಿ ನಡೆದಿದೆ.
ಮಗಳ ಪ್ರಿಯಕರನನ್ನ ತಂದೆ ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಹುಡುಗನ ಸಂಬಂಧಿಕರು ಆರೋಪಿಸಿ ಯುವತಿಯ ಮನೆಯ ಮುಂದೆ ಪ್ರತಿಭಟನೆ ನಡೆಸಸಿದ್ದಾರೆ.
ಮಂಡ್ಯ ನಗರದ ಕಲ್ಲಹಳ್ಳಿ ಗ್ರಾಮದ 17 ವರ್ಷದ ದರ್ಶನ್ ಹತ್ಯೆಯಾಗಿದ್ದು, ಬಾಲಕಿಯ ತಂದೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಹಾಗೂ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಕೇಳಿಬಂದಿದೆ.
ಒಂದೇ ಏರಿಯಾದವರಾಗಿದ್ದ ಇಬ್ಬರು ಅಪ್ರಾಪ್ತರು ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕನ ತಂದೆ ಗಾರೆ ಕೆಲಸ ಮಾಡಿ ಸಂಸಾರದೂಗಿಸಿದರೆ ತಾಯಿ ಪವಿತ್ರ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು.
ಬಾಲಕನ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿದ್ದರಿಂದ ಹಾಗೂ ಜಾತಿ ಬೇರೆಯಾಗಿದ್ದರಿಂದ ಅಪ್ರಾಪ್ತರ ಪ್ರೀತಿ ಒಪ್ಪದ ಹುಡುಗಿ ತಂದೆ ಶಿವಲಿಂಗೂ ಒಂದೆರೆಡು ಬಾರಿ ಮಗಳ ಸಹವಾಸಕ್ಕೆ ಬರದಂತೆ ವಾರ್ನ್ ಕೂಡ ಮಾಡಿದ್ದರಂತೆ.
ಆದರೆ ಇಬ್ಬರ ಕೂಡ ಪ್ರೀತಿ ಮುಂದುವರಿಸಿದ್ದರು. ಜೆಡಿಎಸ್ನಿಂದ ನಗರಸಭೆ ಸದಸ್ಯರಾಗಿದ್ದ ಶಿವಲಿಂಗೂ ಮಗಳ ಪ್ರೀತಿಯಿಂದ ತನ್ನ ಮರ್ಯಾದೆಗೆ ಧಕ್ಕೆ ಆಗುಬಹುದೆಂದು ಭಾವಿಸಿ ಬಾಲಕನನ್ನು ಮನೆಗೆ ಕರೆಸಿಕೊಂಡು ಹಲ್ಲೆ ಮಾಡಿದ್ದು, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ದರ್ಶನ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.