ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿಯರ್ ಲಸಿಕೆ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿಲ್ಲ. ಸಾರ್ವಜನಿಕರು ಊಹಾಪೋ ಹಗಳಿಗೆ ಕಿವಿಗೊಡದೆ ಸ್ವಯಂಪ್ರೇರಿತರಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೆಮ್ಡಿಸಿಯರ್ ಲಸಿಕೆ ಮತ್ತು ಆಕ್ಸಿಜನ್ ಕೊರತೆ ಎದುರಾಗಿದೆ ಎಂಬ ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಅಗತ್ಯವಿರುವಷ್ಟು ಲಸಿಕೆಯನ್ನು ಸಂಗ್ರಹಣೆ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ರೆಮ್ಡಿಸಿಯರ್ ಲಸಿಕೆಯನ್ನು ಉತ್ಪಾದನೆ ಮಾಡುವ ಮೂರು ಸಂಸ್ಥೆಗಳು ರಾಜ್ಯದಲ್ಲಿಯೇ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ನೇರವಾಗಿಯೇ ಚಿಕಿತ್ಸೆ ಕೊಡಲಾಗುವುದು. ಗಾಳಿ ಸುದ್ದಿಗಳಿಗೆ ಗಮನ ಕೊಡದೆ ಸಾರ್ವಜನಿಕರು ಚಿಕಿತ್ಸೆ ಪಡೆಯಲಿ ಎಂದು ಸಲಹೆ ಮಾಡಿದರು.
ಮಹಾರಾಷ್ಟ್ರದಲ್ಲಿ ಇರುವಷ್ಟು ಕೊರೊನಾ ಸೋಂಕಿನ ಪ್ರಮಾಣ ನಮ್ಮ ರಾಜ್ಯಕ್ಕೆ ಬಂದಿಲ್ಲ. ಅಲ್ಲಿ ನಿರೀಕ್ಷೆಗೂ ಮೀರಿದ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ನಮ್ಮಲ್ಲಿ ಈಗಲೂ ಕೂಡ ತುಸು ನಿಯಂತ್ರಣದಲ್ಲೇ ಇದೆ ಎಂದರು.