ಬೆಂಗಳೂರು : ನಾಳೆ ಸೋಮವಾರ ಕಡಲೆಕಾಯಿ ಪರಿಷೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಹೀಗಾಗಿ ಮಧುವಣಗಿತ್ತಿಯಂತೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ಸುತ್ತಮುತ್ತಲಿನ ಆವರಣ, ರಸ್ತೆ ಸಿದ್ಧವಾಗಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಡಲೆಕಾಯಿ ಪರಿಷೆಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪರಿಷೆ ಉದ್ಘಾಟಿಸಲಿದ್ದಾರೆ. ಸುಮಾರು 200 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ.
ದೊಡ್ಡ ಬಸವಣ್ಣ, ದೊಡ್ಡಗಣಪತಿ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ ನಡೆಯಲಿವೆ. ಕಡಲೆಕಾಯಿಗಳಿಂದ ದೊಡ್ಡಗಣಪತಿಗೆ ಅಭಿಷೇಕ ನಡೆಯಲಿದೆ. ರೈತರು ಮತ್ತು ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಸೋಮವಾರ ವಿದ್ಯುಕ್ತವಾಗಿ ಚಾಲನೆಗೊಳ್ಳಲಿರುವ ಬಸವನಗುಡಿಯ ಇಕ್ಕೇಲಗಳಲ್ಲಿ ರೈತರು, ವ್ಯಾಪಾರಿಗಳು ನಾನಾ ಬಗೆಯ ಹಸಿ, ಹುರಿದ ಕಡಲೆಕಾಯಿ ಹಾಕಿಕೊಂಡು ವ್ಯಾಪಾರ ಆರಂಭಿಸಿದ್ದಾರೆ. ಜನ ತಂಡೋಪ ತಂಡವಾಗಿ ಪರಿಷೆಗೆ ಆಗಮಿಸುತ್ತಿದ್ದಾರೆ. ಹಸಿದ ಮತ್ತು ಹುರಿದ ಕಡಲೆ ಕಾಯಿ ಖರೀದಿಸುತ್ತಿದ್ದಾರೆ, ಸವಿಯುತ್ತಿದ್ದಾರೆ. ನ
ಶನಿವಾರ ಸಾಕಷ್ಟು ಮಂದಿ ಪರಿಷೆಯತ್ತ ಮುಖ ಮಾಡಿ ಕಡಲೆಕಾಯಿ ಖರೀದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಭಾನುವಾರ ಸಹ ವಾರಾಂತ್ಯ ಹಿನ್ನೆಲೆಯಲ್ಲಿ ಅತ್ಯಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಸದ್ಯ ಬಸವನಗುಡಿಯ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿವೆ. ರಸ್ತೆ ಎರಡು ಬದಿಯಲ್ಲಿ ಕಡಲೆಕಾಯಿ ರಾಶಿಗಳೇ ಕಾಣಿಸುತ್ತವೆ.