ಇಸ್ರೇಲ್: ವಿಶ್ವಾದ್ಯಂತ ಕೊರೋನಾ ಸೋಂಕು ಪ್ರಕರಣಗಳು ತಲ್ಲಣ ಸೃಷ್ಟಿಸುತ್ತಿವೆ. ನಿಯಂತ್ರಣ ಮೀರಿ ಸೋಂಕು ವ್ಯಾಪಿಸುತ್ತಿದೆ. ಈ ನಡುವೆ ಸಮಾಧಾನವೆನಿಸುವ ಸುದ್ದಿಯೊಂದು ಹೊರಬದ್ದಿದೆ.
ಇಸ್ರೇಲ್ನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕುಸಿತವಾಗುತ್ತಿವೆ. ಹೀಗಾಗಿ ಇನ್ನುಮುಂದೆ ಇಸ್ರೇಲ್ನಲ್ಲಿ ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಹೇಳಿದೆ.
ದೇಶಾದ್ಯಂತ ಕೋವಿಡ್ 19 ಸೋಂಕು ಪ್ರಕರಣಗಳು ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಆದೇಶವನ್ನು ತಿದ್ದುಪಡಿ ಮಾಡಲಾಗಿದ್ದು, ತೆರೆದ ಪ್ರದೇಶದಲ್ಲಿ ಮಾಸ್ಕ್ ಧಾರಣೆ ಅಗತ್ಯವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ, ಸಭೆ-ಸಮಾರಂಭಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ್ತು ಒಳಾಂಗಣಗಳಲ್ಲಿ ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಆದೇಶ ನೀಡಲಾಗಿದೆ. ಇನ್ನು, ಕಳೆದ ಎರಡು ತಿಂಗಳಲ್ಲಿ ವಿಶ್ವದಾದ್ಯಂತ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ.
ಕೋವಿಡ್ ಹರಡಲು ಪ್ರಾರಂಭವಾದ ಬಳಿಕ ಇದುವರೆಗೂ ಇಷ್ಟು ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪರಿಸ್ಥಿತಿ ಚಿಂತಾಜನಕವಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಈ ಹಿಂದೆ ವ್ಯಾಪಕವಾಗಿ ಸೋಂಕು ಹರಡುವಿಕೆಯನ್ನು ತಡೆಗಟ್ಟಿದ್ದ ಕೆಲ ದೇಶಗಳಲ್ಲೂ ಕೂಡ ಈ ಬಾರಿ ಸೋಂಕು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿಶೇಷ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ವೇಗವಾಗಿ ಹರಡುತ್ತಿರುವ ರೂಪಾಂತರಿ ಸೋಂಕು, ಕೋವಿಡ್ ಮುಂಜಾಗ್ರತ ಕ್ರಮಗಳ ಸಡಿಲಗೊಳಿಸುವಿಕೆ ಮತ್ತು ಲಸಿಕೆ ಹಂಚಿಕೆಯಲ್ಲಿನ ತಾರತಮ್ಯ ಸೋಂಕು ಹೆಚ್ಚಲು ಕಾರಣವಾಗಿದೆ.