ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಮತ್ತು ಕಿರುಕುಳ ಆಗದಂತೆ ನೋಡಿಕೊಳ್ಳಲು ವಿಶೇಷ ಗೈಡ್ಲೈನ್ಸ್ ಬಿಡುಗಡೆ ಮಾಡುವುದಾಗಿ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ವರ್ಷಾಚರಣೆ ವೇಳೆ ಮಹಿಳೆಯರಿಗೆ (Women) ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಲ್ಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಹಾಗೂ ಅಬಕಾರಿ ಇಲಾಖೆಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ. ಎಂ.ಜಿ ರಸ್ತೆ, ಬ್ರಿಗೆಡ್ ರೋಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕುಡಿದು ಅತಿರೇಕವಾಗಿ ವರ್ತಿಸಿದ್ರೆ ಹಾಗೂ ಇತರೆ ದುರ್ಘಟನೆಗಳನ್ನ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ಕೋಡ್ ಅಳವಡಿಸುವ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಹೊಸ ವರ್ಷದ ಹೊರತಾಗಿಯೂ ಸಾರ್ವಜನಿಕ ಸ್ಥಳಗಳಲ್ಲಿ ದುರ್ಘಟನೆಗಳು ಸಂಭವಿಸಿದಾಗ ಸ್ಥಳ ಯಾವ ಠಾಣೆ ವ್ಯಾಪ್ತಿಗೆ ಬರಲಿದೆ? ಯಾರನ್ನು ಸಂಪರ್ಕಿಸಬೇಕು? ಇನ್ನೂ ಮುಂತಾದ ಗೊಂದಲಗಳಿದ್ದರೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು.