ಬೆಂಗಳೂರು : ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಮನಮೋಹಕವಾಗಿರುತ್ತದೆ. ಪ್ರತಿ ವರ್ಷದಂತೆ 2024ರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಜಗಜ್ಯೋತಿ ಬಸವೇಶ್ವರ ಅವರ ಹೂವಿನ ಪ್ರತಿಕೃತಿ ಪ್ರಮುಖ ಆಕರ್ಷಣೆಯಾಗಲಿದೆ. 11 ದಿನಗಳ ಫಲಪುಷ್ಪ ಪ್ರದರ್ಶನವು 2024ರ ಜನವರಿ 18 ರಂದು ಉದ್ಘಾಟನೆಗೊಳ್ಳಲಿದ್ದು ಜನವರಿ 28 ರಂದು ಮುಕ್ತಾಯಗೊಳ್ಳಲಿದೆ. ತೋಟಗಾರಿಕಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಮತ್ತು ಲಾಲ್‌ಬಾಗ್ ನಿರ್ದೇಶಕ ಡಿಎಸ್ ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಫಲಪುಷ್ಟ ಪ್ರದರ್ಶನದಲ್ಲಿ ಜಗಜ್ಯೋತಿ ಬಸವೇಶ್ವರ ವಚನ ಸಾಹಿತ್ಯವನ್ನು ಜನರಿಗೆ ತಿಳಿಸಲು ನಿರ್ಧರಿಸಲಾಗಿದೆ. 12 ನೇ ಶತಮಾನದ ವಚನಕಾರ ಮತ್ತು ಸಮಾಜ ಸುಧಾರಕ ಬಸವೇಶ್ವರರು ಲಿಂಗ ತಾರತಮ್ಯ, ಮೂಢನಂಬಿಕೆಯನ್ನು ವಿರೋಧಿಸಿದರು. ಅಲ್ಲದೆ ಸಮಾನತೆಯನ್ನು ಪ್ರತಿಪಾದಿಸಿದರು. ಅವರ ತತ್ವಶಾಸ್ತ್ರ ಮತ್ತು ಬೋಧನೆಗಳು ಇಂದು ಅತ್ಯಗತ್ಯ. ಹೀಗಾಗಿ ಈ ಬಾರಿ ಬಸವಣ್ಣ ಮತ್ತು ಅವರ ವಚನ ಸಾಹಿತ್ಯ ವಿಷಯ ಆಧರಿಸಿ ಹೂವಿನ ಮಾದರಿಗಳನ್ನು ರಚಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಬಸವೇಶ್ವರ ಜೊತೆಗೆ ಅಕ್ಕ ಮಹಾದೇವಿ, ಮಡಿವಾಳ ಮಾಚಯ್ಯ, ಗಂಗಾಂಬಿಕೆ ಮುಂತಾದ ದಾರ್ಶನಿಕರ ಪ್ರತಿಮೆಗಳು, ಅವರ ‘ವಚನ’ಗಳು ಪ್ರದರ್ಶನಗೊಳ್ಳಲಿವೆ. ಹಾಗೇ ‘ಅನುಭವ ಮಂಟಪ’ದ ಪ್ರತಿಕೃತಿಯೂ ಇರಲಿದೆ. “ಬ್ಯಾಂಡ್ ಸ್ಟ್ಯಾಂಡ್” (ವಾದ್ಯಗಾರರಿಗಾಗಿ ನಿರ್ಮಿಸಿದ ವೇದಿಕೆ)ಯಲ್ಲಿ ವಾಚನಗೋಷ್ಠಿಗಳು ನಡೆಯಲಿದ್ದು, ಇದು ವಿಶೇಷ ಆಕರ್ಷಣೆಯಾಗಿದೆ ಎಂದರು.
ಗಿಡಗಳು ಹೂ ಬಿಡಲು 45 ರಿಂದ 60 ದಿನಗಳು ಬೇಕಾಗುವುದರಿಂದ ನವೆಂಬರ್ ಮೊದಲ ವಾರದಲ್ಲಿ ಸುಮಾರು ಮೂರು ಲಕ್ಷ ಹೂವಿನ ಕುಂಡಗಳು ಸಿದ್ಧವಾಗಿವೆ. ಕೆಲವು ಹೂವುಗಳು ಮತ್ತು ಸಸ್ಯಗಳನ್ನು ಸಾಮಾನ್ಯವಾಗಿ ಡಾರ್ಜಿಲಿಂಗ್ ಮತ್ತು ಊಟಿಯಿಂದ ತರಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ವರ್ಷವೂ ಸುಮಾರು 5 ಲಕ್ಷ ಗುಲಾಬಿಗಳು ಮತ್ತು 3 ಲಕ್ಷ ಸೇವಂತಿಗೆ ಹೂವುಗಳನ್ನು ಮುಖ್ಯ ಥೀಮ್ಗಳಿಗಾಗಿ ಬಳಸಲಾಗುತ್ತದೆ. ಈ ವರ್ಷವೂ ಇದೇ ರೀತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.