ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಟಿ-20 ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 5000 ರನ್ ಪೂರೈಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಬುಧವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಎಸೆದ ಮೊದಲ ಓವರ್ ನ ಮೊದಲ ಎಸೆತದಲ್ಲೇ 1 ರನ್ ಕದಿಯುವ ಮೂಲಕ ಕೆ.ಎಲ್. ರಾಹುಲ್ ಟಿ-20 ಕ್ರಿಕೆಟ್ ನಲ್ಲಿ 5000 ರನ್ ಪೂರೈಸಿದರು.
ಕೆ.ಎಲ್. ರಾಹುಲ್ ಅತ್ಯಂತ ವೇಗವಾಗಿ 5000 ರನ್ ಪೂರೈಸಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡರು. ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ರಾಹುಲ್ 143 ಪಂದ್ಯಗಳಲ್ಲಿ ಈ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾದ ಶಾನ್ ಮಾರ್ಶ್ 144 ಪಂದ್ಯಗಳಲ್ಲಿ 5000 ರನ್ ಪೂರೈಸಿದ ದಾಖಲೆಯನ್ನು ಮುರಿದಿದ್ದಾರೆ.
ಭಾರತದ ಪರ 167 ಪಂದ್ಯಗಳಲ್ಲಿ 5000 ರನ್ ಪೂರೈಸಿದ ವಿರಾಟ್ ಕೊಹ್ಲಿ ದಾಖಲೆಯನ್ನು ರಾಹುಲ್ ಹಿಂದಿಕ್ಕಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ 173 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರಾಹುಲ್ 4 ರನ್ ಗಳಿಸುತ್ತಿದ್ದಂತೆ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಔಟಾಗಿ ದೊಡ್ಡ ಮೊತ್ತ ಗಳಿಸುವ ಭರವಸೆಯನ್ನು ಹುಸಿಗೊಳಿಸಿದರು. ಅದ್ಭುತ ಫಾರ್ಮ್ ನಲ್ಲಿದ್ದ ರಾಹುಲ್ ಈ ಋತುವಿನಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ 61, 5 ಮತ್ತು 91 ರನ್ ಗಳಿಸಿದರು.