ಬೆಂಗಳೂರು : ವಿಶ್ವದೆಲ್ಲೆಡೆ ಕೊರೊನಾ ಜೆಎನ್.1 ರೂಪಾಂತರ ಪ್ರಕರಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ ಕೋರ್ಬೀವ್ಯಾಕ್ಸ್ ಲಸಿಕಾ ಅಭಿಯಾನ ಶುರು ಮಾಡಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ಸಜ್ಜಾಗಿದ್ದು, ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ 2ನೇ ಲಸಿಕೆ ಪಡೆದವರಿಗೆ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಸರಬರಾಜು ಮಾಡಿದೆ.
ಈ ಲಸಿಕೆಯನ್ನು ವಿಜಾತಿ (ಹೆಟೆರೊಲಾಗಸ್) ಮುನ್ನೆಚ್ಚರಿಕೆಯಾಗಿ ನೀಡಬಹುದು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಈ ಲಸಿಕೆ ನೀಡಬಹುದು . 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು. ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.