ಬೆಂಗಳೂರು : ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ದಿ ಕ್ಯಾಪಿಟಲ್ ಹೋಟೆಲ್ನಲ್ಲಿ ಊಟ ಮಾಡುವಾಗ ಹೈಕೋರ್ಟ್ ವಕೀಲೆಗೆ ಜಿರಳೆ ಸಿಕ್ಕಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಕಳೆದ ದಿನ ಸಂಜೆ (ಜನವರಿ 4) ಹೈಕೋರ್ಟ್ ವಕೀಲೆ ದಿ ಕ್ಯಾಪಿಟಲ್ ಹೋಟೆಲ್ಗೆ ಊಟಕ್ಕಾಗಿ ಹೋಗಿದ್ದರು. ಈ ವೇಳೆ ಪನ್ನೀರ್ ಗ್ರೇವಿಯನ್ನು ಆರ್ಡರ್ ಮಾಡಿದ್ದರು. ಆದರೆ ಇದನ್ನು ಸೇವಿಸುವಾಗ ಅವರಿಗೆ ಜಿರಳೆ ಕಂಡು ಬಂದಿದೆ. ಇದರಿಂದ ವಕೀಲೆ ಬೆಚ್ಚಿಬಿದ್ದಿದ್ದಾರೆ.
ಹೈಕೋರ್ಟ್ ವಕೀಲೆ ಶೀಲಾ ಅವರಿಗೆ ಪ್ರತಿಷ್ಠಿತ ಹೋಟೆಲ್ ಊಟದಲ್ಲಿ ಜಿರಳೆ ಕಂಡುಬಂದಿದೆ. ಈ ವೇಳೆ ಕೋಪಗೊಂಡ ಅವರು ಹೋಟೆಲ್ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ಆಗ ಸಿಬ್ಬಂದಿ ಉಡಾಫೆ ಮಾತನಾಡಿ ಬೇರೆ ಊಟ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಶೀಲಾ ಅವರು ನೇರ ಹೋಟೆಲ್ ಕಿಚನ್ಗೆ ತೆರಳಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಹೋಟೆಲ್ ಕಿಚನ್ಗೆ ತೆರಳುತ್ತಿದ್ದಂತೆ ಶೀಲಾ ಅವರು ಮತ್ತೊಮ್ಮೆ ಶಾಕ್ ಆಗಿದ್ದಾರೆ. ಆ ಹೋಟೆಲ್ ಕಿಚನ್ ಅವಸ್ಥೆ ಕಂಡು ವಾಕರಿಕೆ ಉಂಟಾಗಿದೆ. ಕಿಚನ್ ಸಂಪೂರ್ಣ ಗಲೀಜು ತುಂಬಿಕೊಂಡಿತ್ತು. ಇದನ್ನು ಕಂಡು ರಸ್ತೆ ಬದಿ ಹೋಟೆಲ್ಗಳೇ ಲೇಸು ಎಂದು ಕಿರುಚಾಡಿದ್ದಾರೆ. ಜೊತೆಗೆ ಹೋಟೆಲ್ ಬಗ್ಗೆ ದೂರು ನೀಡಿದ್ದಾರೆ.