ತುಮಕೂರು : ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ತಾನೇ ಸ್ವಯಂ ಹೆರಿಗೆ ಮಾಡಿಕೊಂಡು ಕೊನೆಗೆ ಹಸುಗೂಸಿನ ಸಾವಿಗೆ ಕಾರಣವಾದ ಘಟನೆ ಅರೇಗುಜ್ಜನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗೌರೀಪುರ ಗ್ರಾಮದ 25 ವರ್ಷದ ಯುವತಿ ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದಳು. ಮನೆಯಲ್ಲಿ ಲೂಸ್ ಲೂಸ್ ಬಟ್ಟೆ ಹಾಕಿಕೊಂಡು ಗರ್ಭ ಧರಿಸಿರೋದನ್ನೇ ಮುಚ್ಚಿಟ್ಟಿದ್ದಳು. ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ಬಳಿಕ ಸಮಾಜಕ್ಕೆ ಹೆದರಿ ಹೆತ್ತ ಮಗುವನ್ನೇ ಬಯಲಿಗೆಸೆಯುವ ಮೂಲಕ ಕಂದನ ಸಾವಿಗೆ ಕಾರಣಳಾಗಿದ್ದಾಳೆ.
ಅವಿವಾಹಿತ ಯುವತಿಗೆ ಪೋಷಕರು ಇಲ್ಲದ ಹಿನ್ನೆಲೆ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಮೊನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ, ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಳು. ನಂತರ ಮಗುವನ್ನ ಅಲ್ಲಿಯೇ ಪಕ್ಕದಲ್ಲಿ ಎಸೆದು ಮನೆಗೆ ತೆರಳಿದ್ದಳು.
ಯುವತಿ ಮನೆಗೆ ಹೋಗಿ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಾಳೆ. ಆದರೆ ಬೆಳಿಗ್ಗೆ ಗ್ರಾಮಸ್ಥರ ಕಣ್ಣಿಗೆ ನವಜಾತ ಹೆಣ್ಣುಮಗುವಿನ ಶವ ಸಿಕ್ಕಿದೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಅತ್ತ ನವಜಾತ ಶಿಶುವಿನ ಶವ ಕೂಡ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಯ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.