ಬೆಂಗಳೂರು : ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡ್ತೀರಾ?, ಸಮಾಜ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಅಪಾಯಕರ ರಕ್ಷಣೆ ಕುರಿತ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿನಾಶಕಾಲೇ ವಿಪರೀತ ಬುದ್ಧಿ. ಶ್ರೀ ರಾಮಮಂದಿರ ಉದ್ಘಾಟನೆ ವೇಳೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿದೆ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರಿಂದಲೇ ತಾವು ಅಧಿಕಾರಕ್ಕೆ ಬಂದಿರುವ ಭಾವನೆ ಕಾಂಗ್ರೆಸ್ ನಲ್ಲಿದೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ ದೇಶದ್ರೋಹಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡ್ತೀರಾ?, ಸಮಾಜ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವುದನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ಅಯೋಧ್ಯೆ ರಾಮಮಂದಿರದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನ ಹಿನ್ನೆಲೆಯಲ್ಲಿ ಇಂದು ವಿಜಯೇಂದ್ರ ಅವರಿಂದ ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡಲಾಗಿದೆ. ಬಳಿಕ ಶೇಷಾದ್ರಿಪುರದಲ್ಲಿ ಮನೆಮನೆಗಳಿಗೆ ಮಂತ್ರಾಕ್ಷತೆ ವಿತರಣೆ ಮಾಡಿದರು. ಮಂತ್ರಾಕ್ಷತೆ ವಿತರಣೆಗೂ ಮುನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಜಯೇಂದ್ರ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ವಿಜಯೇಂದ್ರ ಪಾಲ್ಗೊಂಡರು.