ತುಮಕೂರು : ಕರ್ನಾಟಕ ರಾಜ್ಯದಿಂದ ರಾಹುಲ್ ಗಾಂಧಿ ಅವರು ಸ್ಪರ್ಧಿಸಿ, ಗೆದ್ದು ಹೋದರೆ ಪ್ರಧಾನಿ ಆಗ್ತಾರೆ ಎಂದು ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಬಿ ಜಯಚಂದ್ರ ಅವರು, ಈ ಹಿಂದೆ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾಗಾಂಧಿ ಅವರು ಕರ್ನಾಟಕದ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದು ಹೋಗಿ ಪ್ರಧಾನಿಯಾಗಿದ್ದರು. ಅದೇರೀತಿಯಲ್ಲಿ ತಾಯಿ ಸೋನಿಯಾ ಗಾಂಧಿ ಅವರು ಕೂಡ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದು ಹೋದರು.
ಹೀಗಾಗಿ ರಾಹುಲ್ ಗಾಂಧಿ ಅವರು ಕೂಡ ಕರ್ನಾಟಕದಿಂದ ಸ್ಪರ್ಧಿಸಿದರೆ ಒಳ್ಳೆಯದು. ಕರ್ನಾಟಕದಿಂದ ಗೆದ್ದು ಹೋದವರಿಗೆ ಪ್ರಧಾನಿ ಆಗುವ ಅವಕಾಶ ಇರುತ್ತದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಕೂಡ ಕರ್ನಾಟಕದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆ ಆಗಿ ಹೋದರೆ ಪ್ರಧಾನಿ ಹಾಗೂ ಅವಕಾಶ ಇದೆ ಎಂದು ಟಿ.ಬಿ ಜಯಚಂದ್ರ ಅವರು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.
ಮಗನ ಪರ ಬ್ಯಾಟಿಂಗ್ ಮಾಡಿದ ಟಿ.ಬಿ ಜಯಚಂದ್ರ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಟಿ.ಬಿ ಜಯಚಂದ್ರ ಅವರು ತನ್ನ ಮಗನ ಪರ ಬ್ಯಾಟಿಂಗ್ ಮಾಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಸಂಜಯ್ಗೆ ಟಿಕೆಟ್ ಕೊಡಬೇಕು ಎಂದು ಜಯಚಂದ್ರ ಆಗ್ರಹಿಸಿದ್ದಾರೆ.
ಈ ಮಧ್ಯೆ ನನ್ನ ಮಗನೂ ಕೂಡ ಚುನಾವಣೆ ಸ್ಪರ್ಧೆಗೆ ಇಚ್ಛೆ ವ್ಯಕ್ತಪಡಿಸಿದ್ದಾನೆ. ತುಮಕೂರು ಜಿಲ್ಲೆಯಿಂದ ಹೊಸ ಮುಖಗಳಿಗೆ ಅವಕಾಶ ಕೊಡಬೇಕು. ಅದರಲ್ಲೂ ರಾಜಕೀಯ ಹಿನ್ನೆಲೆಯುಳ್ಳ ಹೊಸ ಮುಖಗಳಿಗೆ ಅವಕಾಶ ಕೊಟ್ಟರೆ ಒಳಿತು. ಅದರಲ್ಲೂ ನನ್ನ ಮಗ ಸಂಜಯ್ ಕೂಡ ತುಮಕೂರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ ಆಕಾಂಕ್ಷಿ ಆಗಿದ್ದಾರೆ ಈ ನಿಟ್ಟಿನಲ್ಲಿ ತನ್ನ ಮಗನಿಗೆ ಟಿಕೆಟ್ ಕೊಡಬೇಕೆಂದು ತುಮಕೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಚರ್ಚೆಯ ಮೊದಲೇ ಟಿ.ಬಿ ಜಯಚಂದ್ರ ಅವರು ತನ್ನ ಮಗನ ಹೆಸರನ್ನ ಹರಿಬಿಟ್ಟಿದ್ದಾರೆ.
ತನ್ನ ಮಗನಿಗೆ ಟಿಕೆಟ್ ಕೊಡುವ ಬಗ್ಗೆ ಕಾರಣ ಕೂಡ ಇದೆ. ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಬೇಕಾದರೆ ಟಿಕೆಟ್ ಕೊಡಬೇಕು. ನಮ್ಮ ಸಮುದಾಯದಲ್ಲಿ ಮದ್ದಣ್ಣ, ಮಲ್ಲಣ್ಣ ಅವರು ಸಂಸದರಾಗಿದ್ದರು. ಅವರ ನಂತರ ಯಾರು ಆಗಿಲ್ಲ. ಇನ್ನಾದರೂ ನಮ್ಮ ಸಮುದಾಯಕ್ಕೆ ಅವಕಾಶ ಕೊಡಲಿ ಅನ್ನೋದು ನನ್ನ ಒತ್ತಾಯ ಎಂದರು.
ಇನ್ನು, ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಈಗ ಇರುವುದು ಬಿಜೆಪಿಯಲ್ಲಿ. ಅವರನ್ನು ಕರೆತಂದು ಟಿಕೆಟ್ ಕೊಡುವಷ್ಟು ಅನಿವಾರ್ಯತೆ ಕಾಂಗ್ರೆಸ್ ಗೆ ಬಂದಿಲ್ಲ. ಅವರನ್ನು ಆಮದು ಮಾಡುವಷ್ಟು ಬರಗಾಲವೂ ಕಾಂಗ್ರೆಸ್ ಗೆ ಬಂದಿಲ್ಲ ಎಂದು ಅವರಿಬ್ಬರ ಬರುವಿಕೆಗೆ ಪ್ರತ್ಯಕ್ಷವಾಗಿಯೇ ಜಯಚಂದ್ರ ಅವರು ವಿರೋಧ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಯಚಂದ್ರ ಅವರು, ಸಚಿವರುಗಳಿಗೆ ಲೋಕಸಭೆಗೆ ಸ್ಪರ್ಧೆ ಮಾಡುವ ಕುರಿತು ಹೈಕಮಾಂಡ್ ಇನ್ನೂ ಸೂಚನೆ ನೀಡಿಲ್ಲ. ನಾಳೆ ಸುರ್ಜೇವಾಲ ಅವರೊಂದಿಗೆ ಸಭೆ ಇದೆ. ಈ ಸಭೆಯಲ್ಲಿ ಎಲ್ಲವೂ ನಿರ್ಧಾರ ಆಗಲಿದೆ ಎಂದರು.