ತುಮಕೂರು : ಅದೊಂದು ಕುಗ್ರಾಮ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸಾರಿಗೆ ಬಸ್ ನ ವ್ಯವಸ್ಥೆ ಕಾಣದ ಒಂದು ಪುಟ್ಟ ಊರು. ಇದ್ದಕ್ಕಿದ್ದಂತೆ ಹೊಸ ವರ್ಷದೊಂದು ಬಹು ನಿರೀಕ್ಷಿತ ಸರ್ಕಾರಿ ಬಸ್ ಗ್ರಾಮಕ್ಕೆ ಬಂದಿದ್ದೆ ತಡ ಇಡೀ ಊರಿನ ಜನ ಬಸ್ಸನ್ನು ತೊಳೆದು, ಅಲಂಕಾರ ಮಾಡಿ, ಪೂಜೆ ಮಾಡಿದ್ದಲ್ಲದೆ ಹಬ್ಬದ ವಾತಾವರಣ ಸೃಷ್ಟಿಸಿದರು.
ಇಂತಹ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಯಾವುದು ಅಂದ್ರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನವಿಲು ಕುರಿಕೆ ಎಂಬ ಪುಟ್ಟ ಗ್ರಾಮ.
ಈವರೆಗೆ ಈ ನವಿಲು ಕುರಿಕೆ ಗ್ರಾಮಕ್ಕೆ ಸಾರಿಗೆ ಬಸ್ ನ ಸೌಲಭ್ಯವೇ ಇರಲಿಲ್ಲ. ಇದರಿಂದಾಗಿ ನವಿಲುಕುರಿಕೆ ಹಾಗೂ ದಮಗಲಯ್ಯನಪಾಳ್ಯದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಹೋಗಲು ಕಾಲ್ನಡಿಗೆ ಅಥವಾ ಸ್ವಂತ ವಾಹನಕ್ಕೆ ಆಶ್ರಯಿಸಬೇಕಿತ್ತು. ಹಲವು ಬಾರಿ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಬಸ್ ನ ಬೇಡಿಕೆ ಸಲ್ಲಿಸಿದ್ದರು. ಆದರೂ ಕೂಡ ಪ್ರಯೋಜನ ಆಗಿರಲಿಲ್ಲ.
ಕೆಲ ದಿನಗಳ ಹಿಂದೆ ಇದೇ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಒಟ್ಟಾಗಿ ಬಸ್ ನ ವ್ಯವಸ್ಥೆಗೆ ಮನವಿ ಸಲ್ಲಿಸಿದರು. ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಗಮನಕ್ಕೂ ಕೂಡ ತರಲಾಗಿತ್ತು. ಪರಿಣಾಮ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಇದೇ ಹೊಸ ವರ್ಷದ ದಿನ ಮೊದಲ ಬಾರಿಗೆ ಗ್ರಾಮಕ್ಕೆ ಹೊಸ ಬಸ್ ಬಂದಿದೆ. ಸಾರಿಗೆ ಬಸ್ ಬಂದಿದ್ದನ್ನ ಕಂಡಂತಹ ಗ್ರಾಮಸ್ಥರು ಇಡೀ ಬಸ್‌ನ್ನ ತೊಳೆದು ,ತಳಿರು ತೋರಣ ಹಾಗೂ ಬಲೂನ್ ಗಳನ್ನು ಕೂಡ ಕಟ್ಟಿ, ಬಣ್ಣ ಬಣ್ಣದ ಪೇಪರ್‌ಗಳಿಂದ ಅಲಂಕಾರ ಮಾಡಿ ಸಂಭ್ರಮಿಸಿದರು.
ನಾವು ಹುಟ್ಟಿದಾಗಿನಿಂದಲೂ ನಮ್ಮೂರಿಗೆ ಬಸ್‌ನ ಸೌಲಭ್ಯ ಇರಲಿಲ್ಲ. ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೂ ಕೂಡ ಪ್ರಯೋಜನ ಆಗಿರಲಿಲ್ಲ. ನಮ್ಮೂರಿನಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗೆ ಮನವಿ ಮಾಡಿದ್ದೆವು. ಸಚಿವ ಡಾ. ಜಿ.ಪರಮೇಶ್ವರ್ ಬಳಿ ಬೇಡಿಕೆ ಇಟ್ಟಿದ್ದೆವು. ಈಗ ನಮ್ಮೂರಿಗೆ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತುಂಬಾ ಅನುಕೂಲ ಆಗಿದೆ. ನಿತ್ಯವೂ ಕೆಲಸಕ್ಕೆ ಹೋಗುವವರಿಗೆ ತುಂಬಾನೇ ಅನುಕೂಲವಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.