ಶಿವಮೊಗ್ಗ : ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಐದನೇ ಉಚಿತ ಗ್ಯಾರಂಟಿ ಯೋಜನೆ ಯುವ ನಿಧಿಗೆ ಇಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ.
ಈಗಾಗಲೇ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಚಾಲನೆ ನೀಡಲಾಗಿದ್ದು, ಆನ್‌ಲೈನ್ ಮೂಲಕ ಈವರೆಗೆ 65 ಸಾವಿರಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಯುವ ನಿಧಿ ಯೋಜನೆ ಎಂದರೇನು? : ಯೋಜನೆಯು ರಾಜ್ಯದ ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಫಲಾನುಭವಿಗೆ ಉದ್ಯೋಗ ಸಿಗುವವರೆಗೆ (ಯಾವುದು ಮೊದಲೋ) ನಿರುದ್ಯೋಗ ಭತ್ಯೆ ಒದಗಿಸುವ ಗುರಿಯನ್ನು ಹೊಂದಿದೆ. ಯುವ ನಿಧಿ ಯೋಜನೆಯು ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಆದವರಿಗೆ 1,500 ರೂ. ಒದಗಿಸುತ್ತದೆ.
ಯುವ ನಿಧಿ ಯೋಜನೆಗೆ ಅರ್ಹತೆ: ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು. ಫಲಾನುಭವಿಯು 2023 ರಲ್ಲಿ ಪದವಿ ಹಾಗೂ ಡಿಪ್ಲೊಮಾ ಪಡೆದಿರಬೇಕು ಮತ್ತು ಕನಿಷ್ಠ 180 ದಿನಗಳವರೆಗೆ ಯಾವುದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಇದ್ದಿರಬಾರದು.
ಯುವ ನಿಧಿ ನೋಂದಣಿಗೆ ಅಗತ್ಯವಿರುವ ದಾಖಲೆಗಳು: ಎಸ್ಎಸ್ಎಕ್ಸಿ ಅಂಕ ಪಟ್ಟಿ, ಪದವಿ ಹಾಗೂ ಡಿಪ್ಲೋಮಾ ಪ್ರಮಾಣಪತ್ರ. ಎಸ್‌ಎಸ್‌ಎಲ್‌ಸಿ(SSLC) ನಂತರ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಡಿಪ್ಲೊಮಾ ಪ್ರಮಾಣಪತ್ರಗಳೊಂದಿಗೆ 8, 9 ಮತ್ತು 10 ನೇ ಅಂಕಪಟ್ಟಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಯುವ ನಿಧಿ ಯೋಜನೆಗಾಗಿ ಸೇವಾಸಿಂಧು ಪೋರ್ಟಲ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಪ್ರತಿ ತಿಂಗಳ 25 ನೇ ತಾರೀಖಿನ ಮೊದಲು ನೋಂದಾಯಿಸುವ ಅಭ್ಯರ್ಥಿಗಳು ಆ ನಿರ್ದಿಷ್ಟ ತಿಂಗಳಿಗೆ ಹಣವನ್ನು ಪಡೆಯುತ್ತಾರೆ ಮತ್ತು 25 ರ ನಂತರ ಅರ್ಜಿ ಸಲ್ಲಿಸುವವರನ್ನು ಮುಂದಿನ ತಿಂಗಳಿಗೆ ಪರಿಗಣಿಸಲಾಗುತ್ತದೆ.