ಬೆಂಗಳೂರು : ರಾಜಧಾನಿ ಎದುರಿಸುತ್ತಿರುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಕೊರತೆ ನೀಗಿಸಲು ಬಿಬಿಎಂಪಿ ತೋಟಗಾರಿಕಾ ವಿಭಾಗ ‘ಇಂಗು ಗುಂಡಿ’ಗಳನ್ನು ಬ್ರಹ್ಮಾಸ್ತ್ರವಾಗಿ ಬಳಸಿಕೊಂಡಿದ್ದು, ಹರಿದು ಹೋಗುವ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸಕ್ಕೆ ಕೈ ಹಾಕಿದೆ.
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ನೂರಾರು ಉದ್ಯಾನ ವನಗಳಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಗಿಡ – ಮರಗಳಿವೆ. ಅವುಗಳ ಪಾಲನೆ ಪೋಷಣೆಗೆ ನೀರು ಸಾಕಾಗುತ್ತಿಲ್ಲ. ಇದರಿಂದ ಅದೆಷ್ಟೋ ಗಿಡಗಳು ನೀರಿಲ್ಲದೆ ಒಣಗುತ್ತಿವೆ. ಅಲ್ಲದೆ, ಮಳೆ ಸುರಿದಾಗ ನೀರು ಹಿಡಿದಿಡಲು ಉದ್ಯಾನ ವನಗಳಲ್ಲಿ ಯಾವ ಸೌಲಭ್ಯವೂ ಇಲ್ಲ. ಹಾಗಾಗಿ, ಮಳೆ ನೀರು ತಡೆದು, ಅದನ್ನು ಪುನರ್ಬಳಕೆ ಮಾಡಿಕೊಳ್ಳಲು ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಇಡೀ ನಗರಕ್ಕೆ ಧನಾತ್ಮಕ ಪರಿಣಾಮ ಬೀರಲಿದೆ.
ಕೆರೆ, ಬಾವಿಗಳ ನಗರವಾಗಿ ಗುರುತಿಸಿಕೊಂಡಿದ್ದ ಬೆಂಗಳೂರು ನಗರ ಬೆಳೆದಂತೆಲ್ಲ ಜಲ ಮೂಲಗಳನ್ನೇ ಕಳೆದುಕೊಂಡಿದೆ. ಸದ್ಯ ಎತ್ತ ನೋಡಿದರೂ ಬಾನೆತ್ತರದ ಕಟ್ಟಡಗಳು, ಸಿಮೆಂಟ್ ರಸ್ತೆಗಳೇ ಕಾಣುತ್ತಿವೆ. ಇದರಿಂದಾಗಿ ನೀರಿನ ಸಮಸ್ಯೆ, ಅಂತರ್ಜಲ ಕೊರತೆ ನಗರವನ್ನು ಕಾಡುತ್ತಿದೆ. ಇದನ್ನು ಕಡಿಮೆ ಮಾಡಲು ಬಿಬಿಎಂಪಿ, ನಗರ ವ್ಯಾಪ್ತಿಯಲ್ಲಿರುವ ಉದ್ಯಾನ ವನಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ.
ಇನ್ನು ಬೆಂಗಳೂರು ನಗರದಲ್ಲಿ ಒಂದು ವರ್ಷಕ್ಕೆ ಸರಾಸರಿ ಕನಿಷ್ಠ 845 ಮಿಲಿ ಮೀಟರ್‌ನಷ್ಟು ಮಳೆ ಸುರಿಯುತ್ತದೆ. ಆದರೆ, ಭೂಮಿಗೆ ಬಿದ್ದ ಶುದ್ಧ ನೀರೆಲ್ಲವೂ ಚರಂಡಿ ಸೇರುತ್ತಿದೆ. ಹೀಗೆ ಪೋಲಾಗುತ್ತಿರುವ ನೀರನ್ನು ತಡೆಯಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಬಿಬಿಎಂಪಿಯ ತೋಟಗಾರಿಕಾ ವಿಭಾಗ, 2022 – 23ನೇ ಸಾಲಿನಲ್ಲಿ ಒಟ್ಟು 83 ಉದ್ಯಾನ ವನಗಳಲ್ಲಿ 966 ಇಂಗು ಗುಂಡಿಗಳನ್ನು ನಿರ್ಮಿಸಿ, ಸಫಲವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಅವುಗಳ ಸಂಖ್ಯೆ ಹೆಚ್ಚಿಸಲು ‘ಯುನೈಟ್ ವೇ ಬೆಂಗಳೂರು’ ಸಹಯೋಗ ಪಡೆದಿರುವ ತೋಟಗಾರಿಕೆ ಇಲಾಖೆ, ಸಿಎಸ್‌ಆರ್ ಅನುದಾನ ಬಳಸಿಕೊಂಡು ಮತ್ತೆ 117 ಉದ್ಯಾನಗಳಲ್ಲಿ ಒಟ್ಟು 1 ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸಲು ಮುಂದಾಗಿದೆ.
ಒಟ್ಟಾರೆಯಾಗಿ ಕಡು ಬೇಸಿಗೆಯಲ್ಲೂ ಕೆರೆ, ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗದಂತೆ ಒಂದು ಹಂತದವರೆಗೆ ತಡೆಯುವುದು ಮಾತ್ರವಲ್ಲದೆ, ನೀರಿನ ಮಟ್ಟವನ್ನು ತಕ್ಕ ಮಟ್ಟಿಗೆ ಹೆಚ್ಚಿಸುತ್ತವೆ. ಗಿಡ – ಮರಗಳ ಬೇರುಗಳಿಗೆ ಬೇಕಾಗುವಷ್ಟು ನೀರುಣಿಸಿ, ಪಾಲನೆ – ಪೋಷಣೆಗೆ ಅನುಕೂಲವಾಗಿವೆ. ಆದಷ್ಟು ಬೇಗ ಬೆಂಗಳೂರಿನ ಅಂತರ್ಜಲ ಕೊರತೆ ನೀಗಲಿ ಎಂಬುವುದೇ ರಾಜ್ ನ್ಯೂಸ್ ಆಶಯ ..
ವರದಿ ; ವರ್ಷಿತಾ ತಾಕೇರಿ