ಬೆಂಗಳೂರು : ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಂಭಾಷಣೆಯಲ್ಲಿ ಕೇಳಿಬಂದ ವಿವೇಕಾನಂದ ಎಂಬ ಹೆಸರಿನ ವ್ಯಕ್ತಿ ಯಾರು ಎಂಬುವುದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಪತ್ತೆ ಹಚ್ಚಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ಸಿಡಿಮಿಡಿಗೊಂಡಿದ್ದಾರೆ.
“ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತು ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು” ಎಂದು ವಾಗ್ದಾಳಿ ಮಾಡಿದ್ದಾರೆ.
“ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! ‘ಕಾಸಿಗಾಗಿ ಹುದ್ದೆ ಮತ್ತು ಕಾಂಗ್ರೆಸ್ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-ಟಿಸಿಎಮ್ ನಿರ್ಮಾಪಕ, ಡೂಪ್ಲಿಕೇಟ್ ಸಿಎಂ-ಡಿಸಿಎಮ್ ನಿರ್ದೇಶಕ.. ಹೇಗಿದೆ? ಎಂದರು.
“ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್ & ರನ್ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.