ತಮ್ಮ ವ್ಯಾಪ್ತಿಯ ಪಬ್, ಬಾರ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ನಿರ್ಲಕ್ಷ್ಯವಹಿಸಿದ ಆರೋಪದಡಿ ಅಶೋಕ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಕಾಂತ್ ಎಫ್.ತೋಟಗಿಯವರನ್ನ ಸೇವೆಯಿಂದ ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ. ನಗರದ ವಿವಿಧ ಸ್ಥಳಗಳಲ್ಲಿರುವ ಖಾಸಗಿ ಹೋಟೆಲ್ಗಳು, ಬಾರ್ ಗಳು, ಪಬ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ರಿಚ್ಮಂಡ್ ರಸ್ತೆಯ ಹೋಟೆಲ್ ವೊಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡುತ್ತಿರುವುದು,ಹೊರ ರಾಜ್ಯಗಳ ಯುವತಿಯರಿಂದ ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿದ್ದರು. ದಾಳಿಯ ವೇಳೆ 54 ಜನ ಗ್ರಾಹಕರನ್ನ ವಶಕ್ಕೆ ಪಡೆದು 19 ಯುವತಿಯರನ್ನ ರಕ್ಷಿಸಲಾಗಿತ್ತು.
ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಧಿ ಮೀರಿ ಹೋಟೆಲ್ ಕಾರ್ಯ ನಿರ್ವಹಣೆ ಹಾಗೂ ಯುವತಿಯರನ್ನು ಇರಿಸಿಕೊಂಡು ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪದಡಿ ಅಶೋಕನಗರ ಠಾಣಾ ಇನ್ಸ್ಪೆಕ್ಟರ್ ಶ್ರೀಕಾಂತ್ ಎಫ್.ತೋಟಗಿಯವರನ್ನ ಅಮಾನತುಗೊಳಿಸಲಾಗಿದೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್