ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಮರುವಿಂಗಡಣೆಯ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣೆ ಕರಡು ಪಟ್ಟಿಯನ್ನು ಕರ್ನಾಟಕ ರಾಜ್ಯಪತ್ರದ ಅಧಿಕೃತ ಜಾಲತಾಣ erajyapatra.karnataka.gov.in ದಲ್ಲಿ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗೆ ಸಲ್ಲಿಸಲು ಸೂಚಿಸಲಾಗಿದೆ.ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣೆಗೆ ರಾಜ್ಯ ಸರ್ಕಾರ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆ ಮಾಡಿದ್ದ 243 ವಾರ್ಡ್ ಗಳನ್ನು ರದ್ದು ಮಾಡಿ 225 ವಾರ್ಡ್ ಗಳಾಗಿ ಮರುವಿಂಗಡಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಹಿನ್ನೆಲೆ ಸರ್ಕಾರ ವಾರ್ಡ್ ಮರುವಿಂಗಡಣೆಯ ಪಟ್ಟಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಿದೆ.
2020ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಸದಸ್ಯರ (ಕಾರ್ಪೋರೇಟರ್‌ಗಳ) ಅಧಿಕಾರವಧಿ ಪೂರ್ಣಗೊಂಡಿದೆ. ಬಳಿಕ ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಲಾಗಿತ್ತು. ಆದರೆ, ನಂತರ, ಬಿಬಿಎಂಪಿ-2020 ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ವೇಳೆ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆಯನ್ನು 243ಕ್ಕೆ ಏರಿಸಲಾಯಿತು. ಆದರೆ, ಈ ವಾರ್ಡ್ ಮರುವಿಂಗಡಣೆ ಸರಿಯಾಗಿಲ್ಲ ಎಂದು ಪಾಲಿಕೆಯ ಮಾಜಿ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಪ್ಪುಗಳನ್ನು ಸರಿಪಡಿಸಿ 12 ವಾರಗಳಲ್ಲಿ ಹೊಸದಾಗಿ ವಾರ್ಡ್‌ಗಳ ಮರುವಿಂಗಡಣೆ ಮಾಡುವಂತೆ ಆದೇಶಿತ್ತು. ಹಾಗಾಗಿ, ರಾಜ್ಯ ಕಾಂಗ್ರೆಸ್ ಸರ್ಕಾರ ಮೂರನೇ ಬಾರಿಗೆ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಸಮಿತಿ ರಚಿಸಿತ್ತು. ಈ ಸಮಿತಿ ವಾರ್ಡ್ ಗಳನ್ನು ಮರುವಿಂಗಡಣೆ ಮಾಡಿ ಸಿಎಂಗೆ ವರದಿ ಒಪ್ಪಿಸಿದೆ.