ಬೆಂಗಳೂರು : ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರಗೆ ಮಾಹಿತಿ ಇರಬಹುದು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಯಾರೋ ಜ್ಯೋತಿಷಿ ಈ ಸರ್ಕಾರ ಉಳಿಯುವುದಿಲ್ಲ ಅಂತಾ ಹೇಳಿದ್ದಾರೆ. ನನಗೂ ಮಾಹಿತಿ ಇದೆ, ಎಲ್ಲಿ ಯಾವಾಗ ಹೇಳಬೇಕೋ ಆಗ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಶಾಸಕರನ್ನು ಸಲಹೆಗಾರರಾಗಿ ನೇಮಕ ಮಾಡಿದ ವಿಚಾರವಾಗಿ ಮಾತನಾಡಿದ ಅಶೋಕ್, ಸಿಎಂಗೆ ಕೊಡುವ ಅಧಿಕಾರ ಇದೆ. ವಿಧಾನಸಭೆ ಒಳಗೆ ಹೊರಗೆ ಜೋರಾಗಿ ಮಾತಾಡಿದವರಿಗೆ ತಕ್ಷಣ ಹುದ್ದೆ ಸಿಗುತ್ತದೆ. ಕಾಂಗ್ರೆಸ್ನಲ್ಲಿ ಚಾಳಿ ಇದೆ, ಜೋರು ಮಾತಾಡಿದವರಿಗೆ ಅವಕಾಶ ಸಿಗುತ್ತದೆ ಎಂದರು.
ಮಾಜಿ ಸಚಿವ ಸೋಮಣ್ಣ ಮುನಿಸು ವಿಚಾರವಾಗಿ ಮಾತನಾಡಿದ ಅಶೋಕ್, ಸೋಮಣ್ಣ ಯಾವುದೇ ಕಾರಣಕ್ಕೂ ಪಾರ್ಟಿ ಬಿಟ್ಟು ಹೋಗಲ್ಲ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ನಾನು ನಿನ್ನೆ ದೂರವಾಣಿ ಕರೆ ಮೂಲಕ ಸೋಮಣ್ಣ ಜೊತೆ ಮಾತಾಡಿದ್ದೇನೆ. ಜನವರಿ 4 ರಂದು ಅವರನ್ನು ಭೇಟಿ ಮಾಡುತ್ತೇನೆ. ಭೇಟಿ ಸಂದರ್ಭದಲ್ಲಿ ಒಳ್ಳೆಯದಂತೂ ಆಗುತ್ತದೆ. ಅವರು ಸಮಾಧಾನಗೊಳ್ಳುವ ವಿಶ್ವಾಸ ಇದೆ ಎಂದರು.