ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮುಂದೆ ಅಭಿಮಾನಿಗಳು ಮುಂದಿನ ಸಿಎಂ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದುಕೊಂಡು ಅಧಿಕಾರ ಹಿಡಿಯಲು ಸಿದ್ಧತೆಯನ್ನು ನಡೆಸಿದೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಸಿಎಂ ಕೂಗು ಕೇಳಿ ಬರುತ್ತಿದೆ. ಈಗಾಗಲೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿವಾಸದ ಬಳಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಹೆಚ್ಚಿನ ಪೊಲೀಸರ ನಿಯೋಜನೆ ಹಾಗೂ ಮನೆಯ ಸಮೀಪ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.
ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಹೈಕಮಾಂಡ್ ಒಗ್ಗಟ್ಟಿನ ಮಂತ್ರ ಪಠಿಸಿದೆ. ಭಾರತ್ ಜೋಡೋ ಯಾತ್ರೆ ವೇಳೆಯಲ್ಲೂ ರಾಹುಲ್ ಗಾಂಧಿಯವರು ಇಬ್ಬರ ಕೈ ಕೈ ಹಿಡಿಸಿದ್ದರು. ಆದರೆ ಇದೀಗ ಅಧಿಕಾರ ಸಿಕ್ಕಾಯ್ತು, ಇಬ್ಬರೂ ಸಿಎಂ ಕುರ್ಚಿಯ ಕನಸು ಕಂಡಿದ್ದಾರೆ. ಇದರಲ್ಲಿ ಯಾರಾದ್ರೂ ಒಬ್ಬರು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಎಂದು ತಿಳಿದುಬಂದಿದೆ. ಇಬ್ಬರು ನಾಯಕರಲ್ಲಿ ಹೈಕಮಾಂಡ್ ಮೊದಲು ಸಿಎಂ ಆಗೋರು ಯಾರು? ಮತ್ತು ಯಾರು ಯಾರಿಗೆ ಸೀಟ್ ಬಿಡ್ತಾರೆ ಎಂಬುದನ್ನು ಕಾಯಬೇಕಾಗಿದೆ.