ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮುಜರಾಯಿ ಇಲಾಖೆಯ ಸಹಕಾರದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ.
ಕಾರ್ತಿಕ ಮಾಸದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 3 ದಿನಗಳ ಕಾಲ ಬಸವನಗುಡಿಯಲ್ಲಿ ಮಾತ್ರವಲ್ಲದೇ ಮಲ್ಲೇಶ್ವರಂನಲ್ಲಿಯೂ ಡಿ.2 ರಿಂದ ಡಿ.4 ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕಡಲೆ ಕಾಯಿ ಪರಿಷೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಉದ್ಘಾಟನೆ ಮಾಡಲಿದ್ದಾರೆ. 800 ಕೆಜಿ ಕಡಲೆ ಕಾಯಿಗಳಿಂದ ಇಪ್ಪತ್ತು ಅಡಿ ಉದ್ದ ಹಾಗೂ ಇಪತ್ತು ಅಡಿ ಎತ್ತರದ ಬಸವ ಮೂರ್ತಿ ಲೋಕಾರ್ಪಣೆ ಮಾಡಲಾಗುತ್ತದೆ.
ಮೂರು ದಿನ ಕಡಲೆಕಾಯಿ ಪರಿಷೆ ನಡುವೆ ಬಯಲು ರಂಗ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಾಳೆ ಬೆಳಗ್ಗೆ 11.30ಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ. ಅದರಲ್ಲೂ ಪಂಚಮ ಸಂಗೀತ ತಂಡದ ಎಲ್.ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ಸಂಜೆ ಗಾನ ಗಂಧರ್ವ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನಗಾನ, ಡಿಸೆಂಬರ್ 4 ಬೆಳಗ್ಗೆ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಇರಲಿದೆ.
ಸಂಜೆ 6-30ಕ್ಕೆ ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್, ತಂಡದವರಿಂದ ಶಿವ ವೀಣಾ ಗಾನ ಸಂಗಮ ನಡೆಯಲಿದೆ. ಈ ಬಾರಿಯ ಕಡಲೆಕಾಯಿ ಪರಿಷೆಗೆ ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ರೈತರು ಭಾಗಿಯಾಗಲಿದ್ದಾರೆ. 200 ಮಳಿಗೆಗಳಲ್ಲಿ ರೈತರ ಬೆಳೆದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಂದ ಜನರಿಗೆ ಪ್ರಸಾದ ರೂಪದಲ್ಲಿ ಕಡಲೆಕಾಯಿ ವಿತರಣೆ ಮಾಡಲಾಗುತ್ತದೆ ಅಲ್ಲದೇ ಸರಿಸುಮಾರು 8ಲಕ್ಷ ಜನರು ಪರಿಷೆಯಲ್ಲಿ ಭಾಗಿ ಸಾಧ್ಯತೆಯಿದೆ.