ಹಾವೇರಿ : ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆ ನಿಲ್ಲಸದೇ ಮುಂದುವರಿಸಿದ್ರೆ ಹಾವೇರಿ ಅಭಿವೃದ್ಧಿ ಗ್ಯಾರಂಟಿ ಎಂದು ಸುದ್ದಿಗೋಷ್ಟಿ ಉದ್ದೇಶಿಸಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಬಸವರಾಜ ಬೊಮ್ಮಾಯಿ ಮಾತನಾಡಿ, ಕೆಲ ದಿನಗಳ ಹಿಂದೆ ಬಿತ್ತನೆ ಮಾಡಲು ನೀರಿಲ್ಲದೇ ರೈತರಿಗೆ ಹಾನಿ ಆಗಿತ್ತು ಆದ್ರೆ ಇದೀಗ ಅತಿಯಾದ ಮಳೆ ಹೆಚ್ಚಾಗಿ ಬಹಳ ತೊಂದರೆ ಆಗಿದೆ. ಉತ್ತರ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ. ಅಲ್ಲದೇ ವರುಣಾರ್ಭಟಕ್ಕೆ ಬ್ಯಾಡಗಿ ತಾಲೂಕಿನಲ್ಲಿ ಚಾವಣಿ ಬಿದ್ದು ವ್ಯಕ್ತಿಯ ಸಾವಾಗಿದೆ. ಕೂಡಲೇ ಮಳೆ ನೀರು ಮನೆಗಳಿಗೆ ಹೋಗಿ ಮನೆಗಳಿಗೆ ಮೂರು ಲಕ್ಷ , ಐದು ಲಕ್ಷ ಪರಿಹಾರ ಕೊಡಿ ಅಥವಾ ಬೆಳೆನಾಶ ಸಂಬಂಧಿಸಿ ಹೆಕ್ಟರ್ ಗೆ 13000 ಪರಿಹಾರ ಕೊಡಲಿ. ಹಿಂದಿನ ಸರ್ಕಾರದ ಮಾದರಿಯಲ್ಲೇ ಕ್ರಮ ತಗೊಬೇಕು. ಮಳೆಯಿಂದಾಗಿ ಸಮಸ್ಯೆಗೆ ಒಳಗಾದ ಜನರನ್ನು ಸುರಕ್ಷಿತ ಜಾಗಕ್ಕೆ ಶಿಫ್ಟ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಆದರೆ ಕಾಂಗ್ರೆಸ್‌ನವರು ಬೇರೆ ಬೇರೆ ಗದ್ದಲದಲ್ಲಿ ಇದ್ದಾರೆ. ಮಳೆಯಿಂದಾಗಿ ರಾಜ್ಯಾದ್ಯಂತ 40 ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಮಳೆಹಾನಿ ಪ್ರದೇಶಕ್ಕೆ ಸಚಿವರು ಧಾವಿಸಿ ಕೆಲಸ ಮಾಡ್ತಾ ಇಲ್ಲ. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ ಕಷ್ಟದಲ್ಲಿರುವ ರೈತರಿಗೆ ನೈತಿಕ ಧೈರ್ಯ ಹೇಳಲಿ. ಇವರಿನ್ನೂ ಸಿಎಲ್ಪಿ ಮೀಟಿಂಗ್ ಗೊಂದಲ, ಸಂಪುಟದ ಗೊಂದಲದಲ್ಲಿ ಇದ್ದಾರೆ. ಇಡೀ ಸರ್ಕಾರವೇ ಗೊಂದಲ್ಲಿದೆ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
ಮೊನ್ನೆ ಸಿಎಂ ಸಿದ್ದರಾಮಯ್ಯ ಹಾವೇರಿ ಬಂದಾಗ ಕೆಲವು ಸೂಚ್ಯಂಕದಲ್ಲಿ ಹಾವೇರಿ ಹಿಂದಿದೆ ಎಂದಿದ್ದಾರೆ. ಯಡಿಯೂರಪ್ಪ ಮೆಡಿಕಲ್ ಕಾಲೇಜಿಗೆ ಅನುಮೋದನೆ ಕೊಟ್ಟರು. ನಿಮ್ಮ ಕಾಲದಲ್ಲಿ ಮೆಡಿಕಲ್ ಕಾಲೇಜಿಗೆ ಒಂದು ನಯಾ ಪೈಸಾ ಕೊಡಲಿಲ್ಲ. ಮೆಗಾ ಮಾರ್ಕೇಟ್ ರಾಣೆಬೆನ್ನೂರಿನಲ್ಲಿ ರೆಡಿ ಮಾಡಿದ್ದು ನಮ್ಮ ಸರ್ಕಾರ. ಹಾಲು ಒಕ್ಕೂಟ ಪ್ರತ್ಯೇಕ ಆಗಬೇಕು ಅಂತ ಹೋರಾಟ ಮಾಡಿದ್ದೇವು. ನಾವು ಅಧಿಕಾರಕ್ಕೆ ಬಂದ ಬಳಿಕ ಪ್ರತ್ಯೇಕ ಹಾಲು ಒಕ್ಕೂಟ ಮಾಡಿದ್ದೇವೆ. ನಾವು ಮಾಡಿದ ಯಾವುದೇ ಯೋಜನೆಗಳನ್ನು ನಿಲ್ಲಿಸದೇ ಮಾಡಿದರೆ ಎಲ್ಲಾ ಸೂಚ್ಯಂಕಲ್ಲೂ ಹಾವೇರಿ ಅಭಿವೃದ್ಧಿ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.