ಬೆಂಗಳೂರು : ಇಸ್ರೋ ವಿಶ್ವ ದರ್ಜೆಯ ವೈಜ್ಞಾನಿಕ ಸಂಸ್ಥೆಯಾಗಿದ್ದು, ದಶಕಗಳಿಂದ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಅವರ ಅಮೋಘ ಸಾಧನೆಗಳು ನಮ್ಮನ್ನು ವಿಶ್ವದ ಅಗ್ರಸ್ಥಾನದಲ್ಲಿರಿಸಿದೆ. ದೇವರು ನಮ್ಮ ರಾಷ್ಟ್ರ ಮತ್ತು ನಮ್ಮ ವಿಜ್ಞಾನಿಗಳನ್ನು ಆಶೀರ್ವದಿಸಲಿ. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಶುಭ ಹಾರೈಸಿದರು.
ಚಂದ್ರನ ಅಂಗಳದಲ್ಲಿ ನಮ್ಮ ದೇಶದ ಗಗನನೌಕೆ ಇಳಿಯುವ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಕೊನೆಯ ಆ 20 ನಿಮಿಷಗಳು ಬಹುಶಃ ಪ್ರತಿಯೊಬ್ಬ ಭಾರತೀಯರ ಎದೆಬಡಿತ ಹೆಚ್ಚಾಗಿರುತ್ತೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಜನ ಕಾತುರವಾಗಿದ್ದಾರೆ. 2019ರ ಸೆಪ್ಟೆಂಬರ್ 6ರಂದು ಆ ಕ್ಷಣದಲ್ಲಿ ಉಂಟಾದ ಆಘಾತ, ನೋವು ಮತ್ತೆ ಎದುರಾಗದಿರಲಿ ಅನ್ನೋದು ಕೋಟ್ಯಂತರ ಜನರ ಪ್ರಾರ್ಥನೆ. ಅದಕ್ಕಾಗಿ ವಿಜ್ಞಾನಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.