ಬೆಂಗಳೂರು : ಸರ್ಕಾರ ಇರಲ್ಲ ಎಂಬ ಹೆಚ್ಡಿಕೆ, ಸಿಪಿ ಯೋಗೀಶ್ವರ್ ಭವಿಷ್ಯ ನುಡಿದ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Home Minister Dr G Parameshwara) ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮದೊಂದಿಗೆ ಮಾತನಾಡಿ, ಇವರೆಲ್ಲ ಯಾವಾಗ ಜ್ಯೋತಿಷ್ಯ ಹೇಳಲು ಶುರು ಮಾಡಿದರೋ ಗೊತ್ತಿಲ್ಲ ಎಂದಿದ್ದಾರೆ.
ನಮ್ಮ ಸರ್ಕಾರದಲ್ಲಿ ಯಾವ ಅಸಮಧಾನ ಯಾರಿಗೂ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದು ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಹಾಗಾಗಿ ಹೀಗೆಲ್ಲ ಮಾತಾಡ್ತಾರೆ ಎಂದು ಎಚ್ಡಿಕೆ, ಸಿಪಿವೈಗೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಸಣ್ಣ ಘಟನೆ ಎಂಬ ಹೇಳಿಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ಸಣ್ಣ ಘಟನೆ ಅಂತ ಹೇಳಿದ್ದು ಆ ಕಾರಣಕ್ಕೆ ಅಲ್ಲ, ಹಿಂದೆಲ್ಲಾ ಇಂತಹ ಘಟನೆಗಳಾಗಿವೆ. ಅದೇ ಶಿವಮೊಗ್ಗದಲ್ಲಿ ಘಟನೆ ಆಗಿರ್ಲಿಲ್ವಾ..? ಆ ರೀತಿ ಹೇಳಿದ್ದಕ್ಕೆ ಅದನ್ನೇ ಟ್ವಿಸ್ಟ್ ಮಾಡಿ ಟರ್ನ್ ಮಾಡಿ ಬೇಜವಾಬ್ದಾರಿ ಹೇಳಿಕೆ ಅಂತಿದ್ದಾರೆ.
ನಾವು ಜವಾಬ್ದಾರಿಯಿಂದ ಕೆಲಸ ಮಾಡ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡ್ತಿದ್ದೇವೆ . ಕಾನೂನು ವಿರೋಧಿ ಕೆಲಸಗಳು ಆಗಬಾರದು ಅಂತ ಎಲ್ಲ ಕ್ರಮಗಳನ್ನೂ ಆಗಿಂದಾಗ್ಗೆ ಕೈಗೊಳ್ತಿದ್ದೇವೆ. ವಿಪಕ್ಷದವ್ರು ಹೇಳೋದನ್ನು ಹೇಳ್ತಿರ್ತಾರೆ, ಅವರು ನೀರಿನಿಂದ ಮೀನು ಆಚೆ ಹಾಕಿದ ಹಾಗೆ ಆಗಿದ್ದಾರೆ ಅಧಿಕಾರ ಹೋಗಿದೆ ಅಂತ ಅವರಿಗೆ ಬೇಸರ ಆಗಿದೆ ಹಾಗಾಗಿ ಅವರು ಹಾಗೆಲ್ಲ ಮಾತಾಡ್ತಾರೆ, ಅವರು ಹೇಳಿದ್ದರಲ್ಲಿ ಸಲಹೆ ಇದ್ರೆ ತಗೋತೇವೆ, ನಮ್ಮ ತಪ್ಪಿದ್ರೆ ತಿದ್ಕೋತೇವೆ.
ಡಿಜೆ ಹಳ್ಳಿ ಕೆಜಿ ಹಳ್ಳಿ ಗೋಲಿಬಾರ್ ಕುರಿತ ವರದಿ ಅಂಗೀಕಾರ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, 2022 ರ ಡಿಸೆಂಬರ್ ನಲ್ಲೇ ಬಿಜೆಪಿ ಸರ್ಕಾರ ಇದ್ದಾಗಲೇ ವರದಿ ಕೊಟ್ಟಿದ್ರುಆ ವರದಿಯನ್ನು ಅವರೇ ಒಪ್ಪಿಕೊಂಡಿದ್ರು ಅವರು ಒಪ್ಪಿಕೊಂಡಿದ್ದನ್ನು ನಾವು ತಿರಸ್ಕರಿಸಲು ಆಗುತ್ತಾ? ಹಾಗಾಗಿ ಅದರ ಗೆಜೆಟೆ ಅಧಿಸೂಚನೆ ಪ್ರಕಟಿಸಲಾಗಿದೆ.
ಬಿಹಾರ ರಾಜ್ಯದಂತೆ ಕರ್ನಾಟಕದಲ್ಲೂ ಜಾತಿ ಸಮೀಕ್ಷೆ ಅಂಗೀಕಾರಕ್ಕೆ ಒತ್ತಾಯ ವಿಚಾರವಾಗಿ ಪರಮೇಶ್ವರ್ ಹೇಳಿಕೆ ನೀಡಿದ್ದು, ನಾವು ಚರ್ಚೆ ಮಾಡುವಾಗ ನಾನು ನನ್ನ ಅಭಿಪ್ರಾಯ ತಿಳಿಸ್ತೇನೆ. ನನ್ನ ಅಭಿಪ್ರಾಯ ಮುಖ್ಯ ಆಗೋದಿಲ್ಲ. ಸರ್ಕಾರ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರುತ್ತೆ. ವರದಿ ಬಗ್ಗೆ ಮುಖ್ಯಮಂತ್ರಿಗಳು ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡ್ತಾರೆ ನಂತರ ಅಂತಿಮವಾಗಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತೆ, ಅಲ್ಲಿವರೆಗೂ ಕಾಯೋಣ ಎಂದಿದ್ದಾರೆ.