ಬೆಂಗಳೂರು : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ನಾನು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆಕಾಂಕ್ಷಿಯಾಗಿರಲಿಲ್ಲ. ಈ ವಿಚಾರವನ್ನು ನಾನು ಹೈಕಮಾಂಡ್‌ಗೆ ಹೇಳಿದ್ದೆ ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನನಗೆ ಓಪನ್ ಹಾರ್ಟ್ ಸರ್ಜರಿ ಆಗಿತ್ತು. ಈಗ ನಾನು ಗುಣಮುಖನಾಗಿದ್ದು, ಸಾರ್ವಜನಿಕರನ್ನು ಭೇಟಿ ಆಗುತ್ತೇನೆ. ವೈದ್ಯರ ಸಲಹೆ ಮೇರೆಗೆ ನಾನು ಬೆಳಗಾವಿ ಅಧಿವೇಶನದಲ್ಲಿ ಮೊದಲ ವಾರ ಹಾಜರಾಗುವುದಿಲ್ಲ. ಎರಡನೇ ವಾರದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇನೆ. ರಾಷ್ಟ್ರ ರಾಜಕಾರಣಕ್ಕೆ ಹೋಗುವ ಯೋಚನೆ ಮಾಡಿಲ್ಲ. ರಾಜ್ಯ ರಾಜಕಾರಣದಲ್ಲೇ ಸಾಕಷ್ಟು ಕೆಲಸ ಮಾಡಬೇಕಿದೆ. ವಿರೋಧ ಪಕ್ಷದಲ್ಲಿ ಇದ್ದು ಕೆಲಸ ಮಾಡಿ ಗೊತ್ತಿದೆ ಎಂದು ತಿಳಿಸಿದರು.
ನಮ್ಮ ಮೇಲೆ 40% ಸರ್ಕಾರ ಎಂದು ಆರೋಪಿಸಿದ್ದರು. ಇವರದ್ದು 50% ಭ್ರಷ್ಟಾಚಾರ ಸರ್ಕಾರ. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ಮುಂದೆ ಗುತ್ತಿಗೆದಾರರು ದಾಖಲೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಆ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿನಿಂದಲೂ ಹಾಗೆಯೇ ಹೇಳುತ್ತಿದ್ದಾರೆ. ಅವರು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಸದನದ ಒಳಗಡೆ ಒಗ್ಗಟ್ಟು ಇರುತ್ತದೆ. ಜನ ಸಾಮಾನ್ಯರ ವಿಷಯಗಳು ಇವೆ. ಲೋಕಸಭೆ ಚುನಾವಣೆ ಎದುರಿಸಲು ಒಗ್ಗಟ್ಟಾಗಿ ಹೋಗುತ್ತೇವೆ. , ರಾಜಕಾರಣದಲ್ಲಿ ಕೆಲವು ಸಲ ಅಂದುಕೊಂಡಂತೆ ಆಗುವುದಿಲ್ಲ ಎಂದು ಹೇಳಿದರು.