ಬೆಂಗಳೂರು : ಸಂಚಾರ ದಟ್ಟಣೆ ತಗ್ಗಿಸುವ ಹಿನ್ನೆಲೆಯಲ್ಲಿ ಶಾಲೆಗಳ ಸಮಯ ಬದಲಾವಣೆ ಬಗ್ಗೆ ಇಂದು ಮಧ್ಯಾಹ್ನ 3.30ಕ್ಕೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ಬಳಿಕ ಭವಿಷ್ಯ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.
ಟ್ರಾಫಿಕ್ ಸಮಸ್ಯೆ ತಗ್ಗಿಸುವ ಹಿನ್ನೆಲೆ ಶಾಲಾ ಸಮಯ ಬದಲಾವಣೆ ಮಾಡಲು ರಾಜ್ಯ ಹೈಕೋರ್ಟ್ ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರಸ್ತುತ 8:45ರಿಂದ 3:30 ವರೆಗೂ ಬಹುತೇಕ ಶಾಲೆಗಳು ನಡೆಯುತ್ತಿದೆ, ಇದನ್ನ ಅರ್ಧತಾಸು ಇಳಿಕೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಶಾಲಾ ಸಮಯ ಬದಲಾವಣೆ ಬಗ್ಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ.
ಇಂದು ನಡೆಯುವ ಸಭೆಗೆ ಅನುದಾನಿತ, ಖಾಸಗಿ ಶಾಲೆಗಳ ಪ್ರತಿನಿಧಿಗಳು, ಸ್ಕೂಲ್ ವಾಹನ ಸಂಘಟನೆಯವರು, ಪೋಷಕ ಸಂಘಟನೆಯ ಪ್ರತಿನಿಧಿ ಹಾಗೂ ಟ್ರಾಫಿಕ್ ಪೊಲೀಸರಿಗೆ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಶಾಲಾ ಸಮಯ ಬದಲಾವಣೆ ಬಗ್ಗೆ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ