ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ಕ್ಷೇತ್ರದಲ್ಲಿ ಜಾರಕಿಹೊಳಿ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ನಡೆಸಲಾಯಿತು.
ದಸರಾ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿಗೆ ಎರಡು ಜೆಸಿಬಿ ಮುಖಾಂತರ ಬುಲ್ಡೋಜರ್ ಮೂಲಕ ಪುಷ್ಪವೃಷ್ಠಿ ಮಾಡುವ ಮೂಲಕ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಅವರಿಗೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಸಾಥ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ ಗ್ರಾಮಕ್ಕೆ ಆಗಮಿಸಿದ ವೇಳೆ ರಮೇಶ್ ಜಾರಕಿಹೊಳಿ, ಮಾಧ್ಯಮ ದೊಂದಿಗೆ ಮಾತನಾಡಿ, ನಾನು ಬಂಡಾಯ ಎದ್ದಾಗ ಎಲ್ಲರೂ ನನ್ನನ್ನು ಬೈದಿದ್ದರು. ನಾನು ಯಾಕೆ ಬಂಡಾಯ ಎದ್ದಿದ್ದೆ ಎಂಬುದಕ್ಕೆ ಇಂದು ಉತ್ತರ ಸಿಕ್ಕಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವ ಕಾಲದಲ್ಲಿಯೇ ಸತೀಶ್ ಅವರಿಗೆ ಹಿಂಸೆ ಆಗುತ್ತಿದೆ. ಬೇರೆ ಯಾರಾದರೂ ಸಿಎಂ ಆಗಿದ್ದರೆ ಸತೀಶ್ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದರೆ ಸತೀಶ್ ಅವರ ಪರಿಸ್ಥಿತಿಯ ಬಗ್ಗೆ ಅವರು ಹೇಳಿದ್ದಾರೆ
ಹಿಂದೆ ಕೆಲವರು ನನ್ನ ಬಂಡಾಯವನ್ನು ವಿರೋಧಿಸಿದ್ದರು. ಅವತ್ತು ನಾನು ಬಂಡಾಯ ಎದ್ದಿದ್ದು, ಇಂದು ಜನರಿಗೆ ಅರ್ಥವಾಗಿದೆ. ಈಗ ಸತೀಶ್ ಜಾರಕಿಹೊಳಿ ಅವರ ನಡೆಯಿಂದ ಜನರಿಗೆ ಉತ್ತರ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯನವರಿಗೆ ಫ್ರೀ ಹ್ಯಾಂಡ್ ಇಲ್ಲ. ಈ ಅವಧಿಯಲ್ಲಿ ಕೆಲವರು ಅವರನ್ನು ಕಟ್ಟಿ ಹಾಕಿದ್ದಾರೆ.
2013 ರಲ್ಲಿ ಇದ್ದ ಸಿದ್ದರಾಮಯ್ಯನವರು ಈಗಿಲ್ಲ, ಅವರ ಆ ಮಾತಿನ ದರ್ಪ ಹಾಗೂ ದಕ್ಷತೆ ಈಗ ಕಾಣುತ್ತಿಲ್ಲ. ಅವರು ಯಾಕೆ ಸೈಲೆಂಟ್ ಆಗಿದ್ದಾರೆಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿದೆ, ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಸುತ್ತಮುತ್ತಲಿನ ಕೆಲವರು ಅವರನ್ನು ಫ್ರೀ ಆಗಿ ಬಿಟ್ಟಿಲ್ಲ ಎಂದಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಯ ವಿಚಾರವಾಗಿ, ಅವರು ನಮ್ಮ ಪ್ರೀತಿಯ ವ್ಯಕ್ತಿ, ಅವರು ಎಲ್ಲಿದ್ದರೂ ನಮ್ಮ ಹಿರಿಯರು. ಅವರನ್ನು ನಾನು ಸತತವಾಗಿ ಆರನೇ ಬಾರಿ ಭೇಟಿಯಾಗಿದ್ದೆನೆ. ಈ ಸಲ ಅವರ ಭೇಟಿ ವಿಚಾರ ಬಹಿರಂಗವಾಗಿದೆ ಅಷ್ಟೇ, ಬಿಜೆಪಿಯನ್ನು ಅವರು ಬಿಡಬಾರದಾಗಿತ್ತು. ಈ ಭೇಟಿ ರಾಜಕೀಯವಾಗಿ ಅಲ್ಲ, ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ ಎಂದಿದ್ದಾರೆ.