ದಾವಣಗೆರೆ : ತಂತ್ರಜ್ಞಾನದ ಬೆಳವಣಿಗೆ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪತ್ರಕರ್ತರಿಗೆ ತರಬೇತಿ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ, ವಿಜೇತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಪತ್ರಿಕೋದ್ಯಮವೂ ತಂತ್ರಜ್ಞಾನ ಮತ್ತು ಬದಲಾದ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು, ವೇಗವನ್ನು ಬದಲಾಯಿಸಿಕೊಳ್ಳುತ್ತಿದೆ. ಹಿಂದೆಲ್ಲಾ ಬರೆಯುವವರೊಬ್ಬರು, ಪ್ರೂಫ್ ನೋಡುವುದಕ್ಕೆ ಹಲವರು ಇರುತ್ತಿದ್ದರು. ಈಗ ಪ್ರೂಫ್ ರೀಡರ್ ಹುದ್ದೆಯೇ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳು ಅಸ್ತಿತ್ವ ಕಳೆದುಕೊಳ್ಳಬಹುದು. ಎಲ್ಲವನ್ನೂ ಸಂಪಾದಕರಿಂದ ವರದಿಗಾರರು ಮಾಡುವ ಕೆಲಸಗಳನ್ನೆಲ್ಲವನ್ನೂ ಮುಂದಿನ ದಿನಗಳಲ್ಲಿ ಒಬ್ಬರೇ ಮಾಡಬೇಕಾಗಬಹುದು. ಇಂತಹ ಕೌಶಲ್ಯ ಪ್ರತಿಭೆಗಳನ್ನು ಸುದ್ದಿ ಸಂಸ್ಥೆಗಳು ಅರಸುತ್ತಿವೆ. ಹೀಗಾಗಿ ಇದಕ್ಕೆ ತಕ್ಕಂತೆ ಪತ್ರಿಕೋದ್ಯಮ ಮತ್ತು ಯುವ ಪೀಳಿಗೆಯ ಪತ್ರಕರ್ತರು ಸಜ್ಜಾಗಬೇಕಿದೆ. ಸಜ್ಜುಗೊಳ್ಳಲು ಬೇಕಾದ ತರಬೇತಿಯನ್ನು ಪತ್ರಕರ್ತರ ಕೂಟಗಳು, ಸಂಘಗಳು ನೀಡಬೇಕಾಗುತ್ತದೆ ಎಂದು ಆಶಿಸಿದರು.
ತಂತ್ರಜ್ಞಾನದ ವೇಗಕ್ಕೆ ಪತ್ರಿಕೋದ್ಯಮ ಸಿಲುಕಿದ್ದರೂ ಪತ್ರಿಕಾ ವೃತ್ತಿಯ ಪ್ರಾಥಮಿಕ ಮತ್ತು ಮೂಲಭೂತ ಕಾಳಜಿ ಅದೇ ಇದೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಯ ಕಾಳಜಿ ಮತ್ತು ಜವಾಬ್ದಾರಿ ಈಗಲೂ ಪತ್ರಕರ್ತರ ಮೂಲಭೂತ ಕರ್ತವ್ಯವೇ ಆಗಿದೆ ಎಂದರು.
ವಿರಕ್ತ ಮಠದ ಬಸವ ಪ್ರಭು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷರಾದ ವಹಿಸಿದ್ದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಮಂಜುನಾಥ್, ದಾವಣಗೆರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಕಣಸೋಗಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.