ಇಂಫಾಲ್: ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೆರಾದಾಸ್ 32 ವರ್ಷ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೆರವಣಿಗೆಯ ವೀಡಿಯೋದಲ್ಲಿ ಆರೋಪಿ ಹಸಿರು ಟಿ ಶರ್ಟ್ ಧರಿಸಿದ್ದ. ಇದೇ ವೀಡಿಯೋ ಸಹಾಯದಿಂದ ತೌಬಲ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವುದು ಇಂಟರ್‍ನೆಟ್‍ನಲ್ಲಿ ಬುಧವಾರ ಹರಿದಾಡಿತ್ತು. ಹರಿದಾಡಿದ್ದ ವೀಡಿಯೋ 2 ತಿಂಗಳ ಹಳೆಯದ್ದಾಗಿದೆ. ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡ ಬಳಿಕ ಕಾಂಗ್‍ಫೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ನಡೆದಿದೆ. ಈ ಸಂಬಂಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲು 12 ಜನ ಪೊಲೀಸರ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ದಿನ ಸುಮಾರು 800 ರಿಂದ 1,000 ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು ಗ್ರಾಮವೊಂದಕ್ಕೆ ನುಗ್ಗಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಮನೆಗಳನ್ನು ಸುಟ್ಟು ಹಾಕಿದ್ದರು. ಈ ವೇಳೆ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಅರಣ್ಯಕ್ಕೆ ಓಡಿಹೋದರು. ನಂತರ ಅವರನ್ನು ನಾಂಗ್‍ಪೋಕ್ ಸೆಕ್ಮೈ ಪೊಲೀಸ್ ತಂಡವು ರಕ್ಷಿಸಿತ್ತು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ದಾಳಿಕೋರರ ಗುಂಪು ಅಪಹರಿಸಿತ್ತು. ದುಷ್ಕರ್ಮಿಗಳು ಮೇಟಿ ಸಂಘಟನೆಗಳ ಸದಸ್ಯರು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.