ಬೆಂಗಳೂರು : ಆರೋಗ್ಯ ಸಚಿವ ಗುಂಡೂರಾವ್ಗೆ ಕಾಮಾಲೆ ರೋಗವಿರುವ ಲಕ್ಷಣಗಳಿದ್ದು, ಪರೀಕ್ಷಿಸಿಕೊಳ್ಳುವುದು ಒಳಿತು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕುಟುಕಿದರು.
ದೆಹಲಿ ಮೊಹಲ್ಲಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದ ದಿನೇಶ್ ಗುಂಡೂರಾವ್ ಅವರು, ರಾಜ್ಯದ ನಮ್ಮ ಕ್ಲಿನಿಕ್ಗಳು ದೆಹಲಿಯ ಮೊಹಲ್ಲಾ ಕ್ಲಿನಿಕ್ ಗಳಿಗಿಂತ ಅದ್ಭುತವಾಗಿವೆ ಎಂದಿದ್ದರು. ಈ ಹೇಳಿಕೆ ಖಂಡಿಸಿದ ಮುಖ್ಯಮಂತ್ರಿ ಚಂದ್ರು ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹಾಗೂ ಗುಂಡೂರಾವ್ ಈ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಆರೋಗ್ಯ ಕೇಂದ್ರದ ವೀಕ್ಷಣೆ ವೇಳೆ ಮೆಚ್ಚಿಕೊಂಡಿದ್ದವರಿಗೆ ಹೊರಗೆ ಬರುತ್ತಿದ್ದಂತೆ ಕೆಟ್ಟದಾಗಿ ಕಂಡಿದ್ದು ಹೇಗೆಂದು ಗೊತ್ತಾಗಲಿಲ್ಲ. ಯಾವುದೋ ಫೋನ್ ಬಂದ ತಕ್ಷಣ ನಿಮ್ಮ ವರಸೆಯನ್ನು ಬದಲಿಸಿಕೊಂಡಿದ್ದು ಏಕೆ ಎಂದು ಹೇಳಬೇಕು. ಒಂದು ಫೋನ್ ಕರೆಗೆ ಹೆದರಿಕೊಂಡುಬಿಟ್ಟಿದ್ದಾರೆ. ಗಳಿಗೆಗೊಂದು ಮಾತನಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.