ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ಗೊಲ್ಲ ಸಮುದಾಯದ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಅಮಾನವೀಯ ಮೌಢ್ಯ ಆಚರಣೆಯೊಂದು ಆಚರಣೆಯಲ್ಲಿದೆ. ಋತುಚಕ್ರ ಸೇರಿದಂತೆ ಇತರೆ ಸಂದರ್ಭದಲ್ಲಿ ಕೆಲ ದಿನ ಕಾಲ ಮಹಿಳೆಯರು ಹಟ್ಟಿಯಿಂದ ಹೊರಗಿರುವ ಅಮಾನವೀಯ ಆಚರಣೆ ಆಚರಿಸಲ್ಪಡುತ್ತಿದೆ. ಹಟ್ಟಿಯ ಹೊರ ವಲಯದಲ್ಲಿನ ಗುಡಿಸಲು, ಬಯಲು ಪ್ರದೇಶಗಳಲ್ಲೇ ಮಹಿಳೆಯರು ಆ ದಿನಗಳು ಕಳೆಯುವವರೆಗೆ ಇರಬೇಕಾಗುತ್ತದೆ.
ನಿನ್ನೆ ಮಧ್ಯರಾತ್ರಿ ವೇಳೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್(poornima srinivas) ಕಾರ್ಯಕ್ರಮವೊಂದರಿಂದ ಮನೆಗೆ ತೆರಳುತ್ತಿರುವಾಗ ಹಿರಿಯೂರು(hiriyuru) ತಾಲೂಕಿನ ಬಡಗೊಲ್ಲರಹಟ್ಟಿ ಬಳಿ ಮೌಢ್ಯ ಆಚರಣೆ ಕಂಡು ಬಂದಿದೆ. ತಕ್ಷಣ ಕಾರು ನಿಲ್ಲಿಸಿದ ಶಾಸಕಿ ಪೂರ್ಣಿಮಾ ಹಟ್ಟಿ ಹೊರಗೆ ಬಯಲಲ್ಲಿದ್ದ ಮಹಿಳೆಯರನ್ನು ಮಾತನಾಡಿಸಿದ್ದಾರೆ. ಮೌಢ್ಯ ಆಚರಿಸದಂತೆ ಮನವೊಲಿಸಿದ್ದಾರೆ. ಈ ವೇಳೆ ಹಟ್ಟಿಯ ಜನರು ಸಹ ಜಮಾಯಿಸಿದ್ದು ಖುದ್ದು ಶಾಸಕಿ ಪೂರ್ಣಿಮಾ ಅವರೇ ಋತು ಚಕ್ರದ ಕಾರಣಕ್ಕೆ ಹಟ್ಟಿಯ ಹೊರಗಿದ್ದ ಮಹಿಳೆಯರನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ.
ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ ಶಾಸಕಿ
ಹೆಣ್ಣು ಮಕ್ಕಳು ಊರ ಹೊರಗೆ ಬಯಲಲ್ಲಿ, ಮುರಿದ ಗುಡಿಸಲಿನಲ್ಲಿ ಇರುವುದು ಅಪಾಯಕಾರಿ. ಅಂತೆಯೇ ಹೆಣ್ಣು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಆಚರಣೆ ಸರಿಯಲ್ಲ. ಈ ಮೌಢ್ಯ ಆಚರಣೆ ಇಂದೇ ಕೊನೆಗಾಣಬೇಕು ಎಂದು ಶಾಸಕಿ ಪೂರ್ಣಿಮಾ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಗೊಲ್ಲ ಸಮುದಾಯದವರೇ ಆಗಿರುವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತಿಗೆ ಗ್ರಾಮದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : – ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ ಪೋರ್ಟ್