ಸರ್ಕಾರ ರೈತರಿಂದ ಖರೀದಿಸಿದ ರಾಗಿ ಹಣವನ್ನು ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದು, ಅಧಿಕಾರಿ ವಿರುದ್ಧ ರೈತರು ಗರಂ ಆಗಿದ್ದಾರೆ. ದಾವಣಗೆರೆಯ ಜಗಳೂರು ತಾಲ್ಲೂಕಿನ ನೊಂದ ರೈತರು ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.
ರಾಗಿ ಬೆಳೆಗಾರರ ಬೆಂಬಲ ಬೆಲೆಯಲ್ಲಿ ಎಂಎಸ್ ಪಿ ಯೋಜನೆಯಡಿಯಲ್ಲಿ ರಾಗಿ ಖರೀದಿಸಿದ ಆಹಾರ ಸರಬರಾಜು ನಿಗಮ ಇಲಾಖೆ ಇದುವರೆಗೂ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಜನವರಿ 2ನೇ ವಾರದಂದು ಸರ್ಕಾರ ರಾಗಿ ಖರೀದಿಸಿದ್ದು, ಹಣ ಪಾವತಿ ಮಾಡದೇ ಹಾಗೂ ಖರೀದಿ ಮಾಡಿದ ರಾಗಿಗೆ ಗ್ರೀನ್ ವೋಚರ್ ಕೊಡದೇ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ.
5-6 ತಿಂಗಳಾದರೂ ಹಣ ಬಂದಿಲ್ಲ ಎಂದು ರೈತರ ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿ ರೈತರಿಂದ 20 ಕ್ವೀಂಟಲ್ ನಷ್ಟು ಸರ್ಕಾರ ರಾಗಿ ಖರೀದಿಸಿದೆ. ಇನ್ನು 70,000 ಕ್ವಿಂಟಾಲ್ ಖರೀದಿ ಬಾಕಿ ಉಳಿದಿದೆ. ಮೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯಗೆ ರೈತರು ಮನವಿ ಸಲ್ಲಿಸಿದ್ದರು.
ಸಿಎಂ ಕೂಡಲೇ ಅಧಿಕಾರಿಗೆ ಫೋನಿನ ಮೂಲಕ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದಾಗ್ಯೂ ಅಧಿಕಾರಿಗಳು ಖ್ಯಾರೆ ಎನ್ನುತ್ತಿಲ್ಲ. ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ ರೈತರಿಗೆ ಅನುದಾನದ ಹಣ ನೀಡದೇ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.