ಬೆಳಗಾವಿ : ಪಾಟ್ನಾದಲ್ಲಿ ನಡೆದ ತೃತೀಯ ರಂಗದ ನಾಯಕರ ಸಭೆಯಲ್ಲಿ ದೇಶದ ಉದ್ಧಾರದ ಬಗ್ಗೆ ಚರ್ಚೆ ಆಗಿಲ್ಲ. ನರೇಂದ್ರ ಮೋದಿಯನ್ನ ಹೇಗೆ ಸೋಲಿಸಬೇಕು, ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಆಗಿದೆ. ಮೋದಿ ಸೋಲಲ್ಲ, ರಾಹುಲ್ ಗಾಂಧಿ ಮದುವೆ ಆಗಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ, ಮತ್ತೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಕಾರ್ಯಕತರು ಸಂಕಲ್ಪ ಮಾಡಬೇಕು. ವಿಧಾನಸಭೆ ಚುನಾವಣೆ ಸೋಲನ್ನು ಮರೆತು ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಶ್ರಮಿಸೋಣ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕರೆಕೊಟ್ಟಿದ್ದಾರೆ.
ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಐದು ಸಾವಿರ ಕೋಟಿ ಅನುದಾನದವನ್ನು ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡಿಸೇಲ್ ಇಲ್ಲದೇ ಬಸ್ ಗಳು ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ. ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ. ಚುನಾವಣೆಗೆ ಮೊದಲು ಎಲ್ಲವೂ ಫ್ರೀ ಅಂತ ಹೇಳಿ ಗ್ಯಾರಂಟಿಗೆ ಕಂಡಿಷನ್ ಹಾಕಿದ್ದು ಯಾಕೆ? ಒಂದೇ ತಿಂಗಳಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ. ಸರ್ಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ, ಏನಾಗಿದೆ ಎಂಬುದು ನನಗೆ ಗೊತ್ತು. ಕೆಲವೇ ದಿನಗಳಲ್ಲಿ ಇವರ ಬಣ್ಣ ಬಯಲಾಗಲಿದೆ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ರು,ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಎನ್ನುವುದು ಗೊತ್ತು. ದೆಹಲಿ ಕಾಂಗ್ರೆಸ್ ನವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಎಲ್ಲ ಕಡೆಗಳ ಪರ್ಸಂಟೇಜ್ ಫಿಕ್ಸ್ ಆಗುತ್ತಿವೆ ಎಂದು ಆರೋಪಿಸಿದರು.
ಯಾರ ಜೊತೆಗೂ ರಾಜಿ ರಾಜಕಾರಣ ಮಾಡಲ್ಲ
ಮೂವತ್ತು ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ಯಾರ ಜೊತೆಗೂ ನಾನು ರಾಜೀ ಮಾಡಿಕೊಂಡು ರಾಜಕಾರಣ ಮಾಡಿಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಪರಂಪರೆ. ನಾನೇನೂ ಯಾರನ್ನೂ ಮನೆಯೊಳಗಿನ ರೂಂಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ಜೊತೆಗಿನ ಎಲ್ಲ ಮಾತುಕತೆಗಳು ಬಹಿರಂಗವಾಗಿಯೇ ನಡೆಯುತ್ತವೆ ಎಂದು ಹೇಳಿದರು.
ಬಿಜೆಪಿಯೇ ನನ್ನ ತಂದೆ-ತಾಯಿ, ಬಿಜೆಪಿ ಕಾರ್ಯಕರ್ತರು ನನ್ನ ಸಹೋದರ-ಸಹೋದರಿಯರು. ನಾನು ಸಿಎಂ ಆಗಿದ್ದಾಗ ಪಕ್ಷ, ಕಾರ್ಯಕರ್ತರ ಆಶಯದಂತೆ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇನೆ. ಸಿಎಂ ಆಗಿದ್ದಾಗ ಕಾರ್ಯಕರ್ತರ ಹಿತ ಕಾದಿದ್ದೇನೆ, ಮುಂದೆಯೂ ಕಾರ್ಯಕರ್ತರ ಹಿತ ಕಾಯುವೆ. ದೇಶ, ಧರ್ಮ ರಕ್ಷಣೆಗೆ ನಾನು ಸದಾ ಜಾಗೃತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.