ಬೆಂಗಳೂರು : ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್ (BPL) ಕಾರ್ಡ್‌ಗಳ ಪೈಕಿ ಅಂದಾಜು 8 ಲಕ್ಷ ಕಾರ್ಡ್‌ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುತ್ತಿಲ್ಲ. ಹೀಗಾಗಿ ಅಂತಹವರನ್ನು ಪತ್ತೆ ಹಚ್ಚಿ ಉಚಿತ ಅಕ್ಕಿ ವಿತರಣೆಯಿಂದ ಹೊರಗಿಡಲು ನಿರ್ಧರಿಸಿದ್ದು, ಇದಕ್ಕಾಗಿ ಮನೆ-ಮನೆ ಸಮೀಕ್ಷೆ ನಡೆಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಹಲವು ಬಿಪಿಎಲ್ (BPL) ಕಾರ್ಡ್‌ದಾರರು ಹಲವು ತಿಂಗಳಿಂದ ಪಡಿತರ ಅಕ್ಕಿಯನ್ನೇ ಪಡೆದಿಲ್ಲ. ಅವರು ಕೇವಲ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಮತ್ತಿತರ ಸರ್ಕಾರಿ ಸೌಲಭ್ಯಗಳಿಗೆ ಸೀಮಿತವಾಗಿ ಬಿಪಿಎಲ್ ಕಾರ್ಡ್ ಬಳಸುತ್ತಾರೆ.
ಹೀಗಾಗಿ ಅಗತ್ಯವಿಲ್ಲದವರ ಹೆಸರಿನಲ್ಲಿ ಅಕ್ಕಿ ದುರ್ಬಳಕೆ ಆಗುವುದನ್ನು ತಪ್ಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದ ಬಿಪಿಎಲ್ (BPL) ಕಾರ್ಡ್‌ದಾರರಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ನೀಡುವ ನಗದು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣಗಳಿಗೆ ಹಲವರು ಅಕ್ಕಿ ಪಡೆಯುತ್ತಿಲ್ಲ. ಅಕ್ಕಿ ಪಡೆದರೂ ಬೇರೆಯವರಿಗೆ ನೀಡುವುದು, ಕಾಳ ಸಂತೆಯಲ್ಲಿ ಮಾರುವುದು ಮಾಡುತ್ತಾರೆ. ಇಂತಹ ದುರ್ಬಳಕೆ ತಡೆಯಲು ಅಗತ್ಯವಿರುವವರಿಗೆ ಮಾತ್ರ ಅಕ್ಕಿ ಪೂರೈಸಲು ಮನೆ-ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಹೊಸ ಕಾರ್ಡ್‌ಗೆ 3 ಲಕ್ಷ ಅರ್ಜಿ: ಇನ್ನು ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇವು ಹಲವು ವರ್ಷಗಳಿಂದ ವಿಲೇವಾರಿಗೆ ಬಾಕಿಯಿವೆ. ಸದ್ಯದಲ್ಲೇ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾರ್ಡ್ ನೀಡಲಾಗುವುದು. ಬಳಿಕ ಅವರಿಗೆ 10 ಕೆ.ಜಿ. ಅಕ್ಕಿ ಅಥವಾ 5 ಕೆ.ಜಿ. ಅಕ್ಕಿ, 5 ಕೆ.ಜಿ. ಅಕ್ಕಿಯ ನಗದು ಪಾವತಿಸಲಾಗುವುದು ಎಂದು ಹೇಳಿದರು.
3-4 ದಿನಗಳಲ್ಲಿ ಬಾಕಿ ಹಣ ವರ್ಗಾವಣೆ: ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲು ಹಣ ವರ್ಗಾವಣೆ ಬಾಕಿ ಇರುವ ಫಲಾನುಭವಿಗಳಿಗೆ 3-4 ದಿನಗಳಲ್ಲಿ ಹಣ ವರ್ಗಾಯಿಸುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 10 ರಿಂದ ಯೋಜನೆಗೆ ಚಾಲನೆ ನೀಡಲಾಗಿದ್ದು ಜುಲೈ 26ರವರೆಗೆ 28 ಜಿಲ್ಲೆಗಳ 97.27 ಲಕ್ಷ ಕಾರ್ಡ್‌ಗಳ 3.26 ಕೋಟಿ ಫಲಾನುಭವಿಗಳಿಗೆ ಬರೋಬ್ಬರಿ 566 ಕೋಟಿ ರೂಪಾಯಿಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ 3.08 ಲಕ್ಷ ಕಾರ್ಡುಗಳ ಪೈಕಿ 10.83 ಲಕ್ಷ ಫಲಾನುಭವಿಗಳಿಗೆ ಇನ್ನೆರಡು ದಿನಗಳಲ್ಲಿ 17.47 ಕೋಟಿ ರು.ಗಳು ಪಾವತಿಯಾಗಲಿದೆ. ಉಡುಪಿ ಮತ್ತು ವಿಜಯನಗರ ಜಿಲ್ಲೆಯ 3.84 ಲಕ್ಷ ಕಾರ್ಡುಗಳ 15.55 ಲಕ್ಷ ಫಲಾನುಭವಿಗಳ 25.43 ಕೋಟಿ ರೂಪಾಯಿ. ಸಂದಾಯ ಬಾಕಿ ಉಳಿದಿದ್ದು ಡಿಎಸ್‌ಸಿ ಕೀ ಮ್ಯಾಪಿಂಗ್ ಬಳಿಕ ಹಣ ಖಾತೆಗೆ ಬಂದು ಸೇರಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.