Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political News

ಲೀಕ್ ಆದ ವಿಪಕ್ಷ ನಾಯಕ ಆರ್. ಅಶೋಕ್ ಭಾಷಣದಲ್ಲೇನಿದೆ ಗೊತ್ತಾ?

ಬೆಂಗಳೂರು : ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಸದನದಲ್ಲಿ ಭಾಷಣ ಮಾಡೋಕು ಮುನ್ನವೇ ವಿಪಕ್ಷ ನಾಯಕ ಆರ್ ಅಶೋಕ್ ಮಾಧ್ಯಮ ಸಂಯೋಜಕರಿಂದ ಭಾಷಣ ಲೀಕ್‌ ಆಗಿದೆ. ಈ ಭಾಷಣದಲ್ಲಿ ಯಡಿಯೂರಪ್ಪ ಅವರನ್ನು ಗುಣ ಗಾನ ಮಾಡಿರುವ ಬೆಳಕಿಗೆ ಬಂದಿದೆ.

ವಿಪಕ್ಷ ನಾಯಕ ಆರ್. ಅಶೋಕ್ ಭಾಷಣ : ಹೈಲೈಟ್ಸ್‌

ಪ್ರತಿಪಕ್ಷದ ನಾಯಕರಾದ ಮಾನ್ಯ ಅಶೋಕ್‌ ಅವರ ಮೊದಲ ದಿನದ ಭಾಷಣಕ್ಕೆ ಟಿಪ್ಪಣಿ
• ಪ್ರಜಾಪ್ರಭುತ್ವ ವ್ಯವಸ್ಥೆಯ ಪರಮೋಚ್ಛ ವೇದಿಕೆಯಾಗಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ.

• ದೇಶದ ಹೆಮ್ಮೆಯ ನಾಯಕರಾದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಡ್ಡಾಜೀ, ಪಕ್ಷದ ಹಿರಿಯರು, ಕೇಂದ್ರದ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರು, ಈ ರಾಜ್ಯ ಕಂಡ ಅಪ್ರತಿಮ ನಾಯಕರು ಹಾಗೂ ಹಿರಿಯರಾದ ಶ್ರೀ ಬಿಎಸ್‌ ಯಡಿಯೂರಪ್ಪಜೀ, ಮಾಜಿ ಮುಖ್ಯಮಂತ್ರಿಗಳು ಹಾಗೂ ಆತ್ಮೀಯರೂ ಆದ ಶ್ರೀ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರೆ ನಾಯಕರು ನಮ್ಮ ಎಲ್ಲ ಶಾಸಕರ ಸಹಕಾರದೊಂದಿಗೆ ಈ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

• ಅದರಲ್ಲೂ ವಿಶೇಷವಾಗಿ ವಿಧಾನಸಭೆಗೆ ಸತತವಾಗಿ ಏಳು ಸಲ ಆಯ್ಕೆ ಮಾಡುತ್ತಾ ಬಂದಿರುವ ಹಿಂದಿನ ಉತ್ತರಹಳ್ಳಿ ಹಾಗೂ ಈಗಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾದರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿಸುತ್ತೇನೆ.

• ಕರ್ನಾಟಕ ವಿಧಾನಸಭೆಯ ಕಾರ್ಯವೈಖರಿ ಇಡೀ ದೇಶಕ್ಕೆ ಮಾದರಿಯಾಗಿದೆ. ಅದರಲ್ಲೂ ಈ ಮನೆಯಲ್ಲಿ ನಡೆದಿರುವ ಚರ್ಚೆ, ರೂಪಿತವಾಗಿರುವ ನೀತಿ – ನಿರೂಪಣೆಗಳ ಗುಣಮಟ್ಟ ಅತ್ಯಂತ ಮೌಲ್ಯಯುತವಾದುದ್ದಾಗಿವೆ.

• ಅಂತಹ ಮಾದರಿಯಾದ, ಉನ್ನತ ಪರಂಪರೆಯನ್ನು ನಮ್ಮ‌ ಹಿರಿಯರು ನಮಗೆ ಹಾಕಿಕೊಟ್ಟಿದ್ದಾರೆ. ಸಾರ್ವಜನಿಕ ಬದುಕನ್ನು ಹಸನು ಮಾಡುವ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಶಾಸನಗಳ ರಚನೆ ಆಗಿವೆ. ನಂತರ ಅವು ಇಡೀ ದೇಶದ ಸಾಮಾಜಿಕ, ರಾಜಕೀಯ ಬದುಕಿನ ದಿಕ್ಕು ದೆಸೆಗಳನ್ನು ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂಬ ಹೆಮ್ಮೆ ನಮಗಿದೆ.

• ನಿಜ ಅರ್ಥದಲ್ಲಿ ವಚನಕಾರರ ಕಾಲದ ಅನುಭವ ಮಂಟಪದ ಮಾದರಿಯಲ್ಲೇ ಈ ಮಹಾಮನೆ ಕಾರ್ಯನಿರ್ವಹಿಸಿದೆ ಎಂದರೆ ಉತ್ಪ್ರೇಕ್ಷೆ ಆಗಲಾರದು ಎಂದು ಭಾವಿಸಿದ್ದೇನೆ.

• ಇತ್ತೀಚಿನ ಕೆಲ ವರ್ಷಗಳಲ್ಲಿ ವಿಧಾನಸಭೆ ಕಲಾಪಗಳು ರಾಜಕೀಯ ಜಿದ್ದಾಜಿದ್ದಿನ ಮೇಲಾಟಗಳಿಗೆ, ವೈಯಕ್ತಿಕ ಪ್ರತಿಷ್ಠೆಗಳಿಗೆ, ಬೇರೆ ಬೇರೆ ಹಿತಾಸಕ್ತಿಗಳಿಗೆ ಬಲಿಯಾಗಿರುವುದನ್ನೂಕಂಡಿದ್ದೇವೆ.

• ಕಲಾಪಗಳ ಗುಣಮಟ್ಟ ಮತ್ತು ಮೌಲ್ಯಗಳ ಬಗ್ಗೆ ಇತ್ತಿಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ. ಇದಕ್ಕೆ ಎರಡೂ ಕಡೆಯ ಸದಸ್ಯರು ಜವಾಬ್ದಾರರು ಎಂಬುದು ನನ್ನ ಅಭಿಪ್ರಾಯ. ಇದನ್ನು ಎಲ್ಲರೂ ಒಪ್ಪುತ್ತೀರಿ ಎಂದು ಭಾವಿಸಿದ್ದೇನೆ. ಹೀಗಾಗಿ ಇದನ್ನು ಹೆಚ್ಚು ಲಂಬಿಸಲು ನಾನು ಹೋಗುವುದಿಲ್ಲ.

• ಭಾರತೀಯ ಜನತಾಪಕ್ಷ ಪ್ರತಿಪಕ್ಷ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಾಗಲೆಲ್ಲಾ ಅತ್ಯಂತ ರಚನಾತ್ಮಕವಾಗಿ, ಗೌರವಯುತವಾಗಿ ಮತ್ತು ಜನಪರವಾಗಿ ಕಾರ್ಯ ನಿರ್ವಹಿಸಿದೆ ಎಂಬ ಹೆಮ್ಮೆ ನಮಗಿದೆ.

• ಈ ಸ್ಥಾನದಲ್ಲಿ ಕುಳಿತು ನಮ್ಮ ರಾಜಾ ಹುಲಿ ಎಂದೇ ಖ್ಯಾತರಾಗಿರುವ ಶ್ರೀಮಾನ್‌ ಬಿಎಸ್‌. ಯಡಿಯೂರಪ್ಪ ಅವರು ನಿರ್ವಹಿಸಿರುವ ಪಾತ್ರ ಎಲ್ಲ ಕಾಲಕ್ಕೂ ಮಾದರಿ.

• ಇಡೀ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಟ ನಡೆಸಿ, ಹೋರಾಟ ರೂಪಿಸಿ, ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಅತ್ಯಂತ ಘನತೆಯಿಂದ ನಿರ್ವಹಿಸಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತು ಈಗಲೂ ಜನಜನಿತ.
• ಬಿಎಸ್‌ವೈ ಪ್ರತಿಪಕ್ಷ ನಾಯಕರಾಗಿ ಈ ರಾಜ್ಯದ ರೈತರು, ಶೋಷಿತರು, ಮಹಿಳೆಯರು, ವಿದ್ಯಾರ್ಥಿಗಳು, ಅಹಿಂದ ವರ್ಗದ ಜನರ ಪರವಾಗಿ ನಡೆಸಿರುವ ಹೋರಾಟ, ಪ್ರತಿಭಟನೆಗಳಿಗೆ ಲೆಕ್ಕವೇ ಇಲ್ಲ. ಅವೆಲ್ಲವೂ ಇತಿಹಾಸದ ಪುಟಗಳಲ್ಲಿವೆ.

• ಈ ಸದನದಲ್ಲಿ ಹಗಲು-ರಾತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವೆಲ್ಲರೂ ಪ್ರತಿಭಟನೆ ನಡೆಸಿರುವುದನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಅಂತಹ ಗಟ್ಟಿಯಾದ ಮಾರ್ಗದರ್ಶನದ ಪರಂಪರೆ ನನಗಿದೆ.

• ಯಡಿಯೂರಪ್ಪ ಅವರಂತೆ ರಾಜ್ಯದ ಏಳೂವರೆ ಕೋಟಿ ಜನತೆಯ ಧ್ವನಿಯಾಗಿ ರಚನಾತ್ಮಕ ಪ್ರತಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಬೇಕು ಎಂಬ ಹಂಬಲ ನನಗಿದೆ.

• ಇದಕ್ಕಾಗಿ ಈ ಭಾಗದ ನಮ್ಮ ಪಕ್ಷದ ಎಲ್ಲ ಶಾಸಕರು, ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ನ ಎಲ್ಲ ಶಾಸಕರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನವನ್ನೂ ನಾನು ಕೋರುತ್ತೇನೆ.

• ಈ ಸಂದರ್ಭದಲ್ಲಿ ಟ್ರೆಜರಿ ಬೆಂಚಿನಲ್ಲಿ ಕುಳಿತಿರುವ ಆಡಳಿತ ಪಕ್ಷದ ಸಭಾ ನಾಯಕರಾದ ಮುಖ್ಯುಮಂತ್ರಿ ಶ್ರೀ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ಪಕ್ಷದ ಎಲ್ಲ ಶಾಸಕರು ಮತ್ತು ರೈತಸಂಘದ ಏಕೈಕ ಶಾಸಕರ ಸಹಕಾರವನ್ನೂ ನಾನು ಬಯುಸುತ್ತೇನೆ.

• ಸಂವಿಧಾನದತ್ತ ಅಧಿಕಾರ ಚಲಾಯಿಸುವ ಉನ್ನತ ಹುದ್ದೆ ಸ್ಪೀಕರ್‌ ಸ್ಥಾನ. ಆ ಪೀಠದಲ್ಲಿ ಕುಳಿತು ಸಭಾಧ್ಯಕ್ಷರ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಯುತ ಯು.ಟಿ. ಖಾದರ್‌ ಅವರಿಂದ ವಿಶೇಷವಾಗಿ ನಮಗೆ ಹೆಚ್ಚಿನ ಸಹಕಾರ ಬೇಕಾಗಿದೆ.

• ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷದ ಕಡೆ ಸ್ಪೀಕರ್‌ ಅವರು ಹೆಚ್ಚಿನ ಒಲವು ತೋರಬೇಕು. ಆಗ ಕಲಾಪವು ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಆಡಳಿತ ಸರಿದಾರಿಯಲ್ಲಿ ಸಾಗುತ್ತದೆ.

• ಪ್ರತಿಪಕ್ಷ ಸದಸ್ಯರನ್ನು ಸ್ಪೀಕರ್‌ ಅವರು ಮಲತಾಯಿ ಮಕ್ಕಳಂತೆ ನೋಡಬಾರದು ಎಂಬ ಮಾತನ್ನು ಈ ಭಾಗದಲ್ಲಿ ಕುಳಿತಾಗ ಮಾನ್ಯ ಸಿದ್ದರಾಮಯ್ಯನವರೇ ಅನೇಕ ಸಲ ಹೇಳಿದ್ದಾರೆ. ಅದೇ ಮಾತನ್ನು ನಾನು ಹೇಳುತ್ತಾ ಸ್ಪೀಕರ್‌ ಅವರ ಸಹಕಾರ ಕೋರುತ್ತೇನೆ.

• 1962 ರಿಂದ ಎಸ್‌. ಶಿವಪ್ಪ, ಹೆಚ್‌. ಸಿದ್ದವೀರಪ್ಪ, ಹೆಚ್.ಡಿ. ದೇವೇಗೌಡ, ಹೆಚ್‌.ಟಿ. ಕೃಷ್ಣಪ್ಪ, ಎಸ್‌.ಆರ್.‌ ಬೊಮ್ಮಾಯಿ, ಆರ್‌. ಗುಂಡೂರಾವ್‌, ಡಿ. ದೇವರಾಜ್‌ ಅರಸ್‌, ಎ. ಲಕ್ಷ್ಮಿಸಾಗರ್‌, ಎಂ. ವೀರಪ್ಪಮೊಯ್ಲಿ, ಎಸ್‌. ಬಂಗಾರಪ್ಪ,, ಹೆಚ್‌.ಡಿ. ಚೌಡಯ್ಯ, ಕೆ.ಎಸ್‌. ನಾಗರತ್ನಮ್ಮ, ಡಿ.ಬಿ. ಚಂದ್ರೇಗೌಡ, ಆರ್‌.ವಿ. ದೇಶಪಾಂಡೆ, ಬಿ.ಎಸ್‌. ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಜಗದೀಶ್‌ ಶೆಟ್ಟರ್‌, ಎನ್‌. ಧರಮ್‌ಸಿಂಗ್‌, ಸಿದ್ದರಾಮಯ್ಯ ಮತ್ತು ಹೆಚ್‌.ಡಿ. ಕುಮಾರಸ್ವಾಮಿ ಅವರಂತಹ ಘಟಾನುಘಟಿ ನಾಯಕರು ಈ ಸ್ಥಾನದಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿ ಪ್ರತಿಪಕ್ಷಗಳನ್ನು ಮುನ್ನಡೆಸಿದ್ದಾರೆ.

• ಆ ಎಲ್ಲ ಮಹನೀಯರ ಸಾರ್ವಜನಿಕ ಬದುಕು, ಹಿನ್ನಲೆ, ಅವರು ನಡೆಸಿರುವ ಹೋರಾಟ ಮತ್ತು ಕರ್ತವ್ಯ ನಿರ್ವಹಣೆ ಸಂದರ್ಭಗಳಲ್ಲಿ ತಾವು ನಂಬಿಕೊಂಡ ಸಿದ್ಧಾಂತಗಳಿಗೆ ರಾಜಿ ಇಲ್ಲದೆ ಜನಪರವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

• ಆ ಕಾರಣಗಳಿಂದಲೇ ಶ್ರೀಯುತ ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂಬುದು ನನ್ನ ನಂಬಿಕೆ. ಈ ಸ್ಥಾನದಲ್ಲಿ ಕುಳಿತ ಅನೇಕ ಮಹನೀಯರು ಬಳಿಕ ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

• ಈ ಎಲ್ಲ ನಾಯಕರು ಒಬ್ಬರಿಗಿಂತ ಮತ್ತೊಬ್ಬರು ತಮ್ಮದೇ ಆದ ಭಿನ್ನ ಕಾರ್ಯಶೈಲಿಯಿಂದ ಮಾದರಿಯಾಗಿದ್ದಾರೆ.

• ಈ ಮಹನೀಯರ ಪೈಕಿ ಅನೇಕರನ್ನು ಹತ್ತಿರದಿಂದ ನೋಡಿ, ಅವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಜತೆಗೆ ಚಿಕ್ಕಂದಿನಿಂದಲೂ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದ ಹಿರಿಯರ ಒಡನಾಟ ಮತ್ತು ಮಾರ್ಗದರ್ಶನ ದೊರಕಿದ್ದು ನನ್ನ ಸೌಭಾಗ್ಯ.

• ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ದೃಢ ನಂಬಿಕೆ ಕಲಿಸಿ, ಅಚಲವಾದ ರಾಷ್ಟ್ರಪ್ರೇಮದ ಪಾಠ ಕಲಿತಿದ್ದೇ ಸಂಘ ಪರಿವಾರದ ಸಹಚರ್ಯದಿಂದ. ಈ ಕಾರಣಕ್ಕಾಗಿ ಕೊನೆ ಉಸಿರಿನ ತನಕ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದ ಎಲ್ಲ ಹಿರಿಯರು ಮತ್ತು ಬಂಧುಗಳಿಗೆ ಋಣಿಯಾಗಿರುತ್ತೇನೆ.

• ನನ್ನ ಸಾರ್ವಜನಿಕ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಸಂಘ ಪರಿವಾರದ ಸಖ್ಯದಿಂದ ಚಿಕ್ಕವನಾಗಿದ್ದಾಗಲೇ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆಯಿತು. ಇದೇ ಪ್ರೇರಣೆಯಿಂದ ಎರಡು ಬಾರಿ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ನಿಂತು ಸೋಲು ಅನುಭವಿಸಿದ್ದೆ.

• ಶ್ರೀಮತಿ ಇಂದಿರಾಗಾಂಧಿ ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡು ಒಂದು ತಿಂಗಳು ಸೆರೆವಾಸವನ್ನೂ ಅನುಭವಿಸಿದ್ದೆ.

• ಉತ್ತರಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ಎಂ. ಶ್ರೀನಿವಾಸ್‌ ಅವರು ಲೋಕಸಭೆಗೆ ಸ್ಪರ್ಧಿಸಿ ಸಂಸದರಾದ ಬಳಿಕ ವಿಧಾನಸಭೆಗೆ ನಡೆದ ಮರು ಚುನಾವಣೆಯಲ್ಲಿ ಪಕ್ಷ ವಿಶ್ವಾಸವಿಟ್ಟು ಮೊದಲ ಸಲ ನನಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿತು. ಅಂದು ನನ್ನ ಕೈ ಹಿಡಿದ ಮತದಾರ ಪ್ರಭುಗಳು ಇವತ್ತಿಗೂ ನನ್ನ ಜತೆ ನಿಂತಿದ್ದಾರೆ.

• ಶಾಸಕನಾಗಿ ಈ ಏಳು ಅವಧಿಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಮಾತ್ರವಲ್ಲದೆ ಆಡಳಿತ ಪಕ್ಷದಲ್ಲಿ ಕುಳಿತು, ಸಚಿವನಾಗಿ ಕೆಲಸ ಮಾಡುವ ಅವಕಾಶವು ಸಿಕ್ಕಿದೆ.

• ಕುಮಾರಣ್ಣ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವನಾಗಿ, ಬಿಎಸ್‌ವೈ ನೇತೃತ್ವದ ಚೊಚ್ಚಲ ಬಿಜೆಪಿ ಸರ್ಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವನಾಗಿ, ಬಳಿಕ ಸಾರಿಗೆ ಮತ್ತು ಗೃಹ ಸಚಿವನಾಗಿ, ಜಗದೀಶ್‌ ಶೆಟ್ಟರ್‌ ಮಂತ್ರಿ ಮಂಡಳದಲ್ಲಿ ಸಾರಿಗೆ, ಗೃಹ ಖಾತೆಗಳ ನಿರ್ವಹಣೆ ಜವಾಬ್ದಾರಿ ಸಿಕ್ಕಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕಂದಾಯ ಸಚಿವನಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದೇನೆ.

• ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆ ಮತ್ತು ಬಿಬಿಎಂಪಿ ಚುನಾವಣೆ ಹೊಣೆಗಾರಿಕೆಯನ್ನು ದಶಕಗಳ ಕಾಲ ನಿರ್ವಹಿಸಿದ್ದೇನೆ. ಹಾಗೆಯೇ ರಾಜ್ಯದ ಅನೇಕ ಭಾಗಗಳಲ್ಲಿ ಕೆಲಸ ಮಾಡಲು, ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸುವ ಬಹು ದೊಡ್ಡ ಹೊಣೆಯನ್ನೂ ನಿರ್ವಹಿಸಿದ್ದೇನೆ.

• ಇಷ್ಟಾದರೂ ಈಗಲೂ ನಾನು ರಾಜಕಾರಣದ ವಿದ್ಯಾರ್ಥಿಯೇ ಎಂದು ನಿಮ್ಮಗಳ ಮುಂದೆ ವಿನಮ್ರವಾಗಿ ನಿವೇದಿಸಿಕೊಳ್ಳುತ್ತೇನೆ. ಸಾರ್ವಜನಿಕ ಬದುಕಿನಲ್ಲಿ ಕೊನೆಯ ದಿನದ ತನಕ ಕಲಿಯುವುದು ಇದ್ದೇ ಇರುತ್ತದೆ ಎಂಬುದು ನನ್ನ ಅಚಲವಾದ ನಂಬಿಕೆ.

• ಓಡುವವನು ಮಾತ್ರ ಎಡುವುತ್ತಾನೆ ಎಂಬಂತೆ ಕೆಲವೊಮ್ಮೆ ಯಾವುದೋ ಕಾರಣಗಳಿಗೆ ತಪ್ಪುಗಳನ್ನೂ ಮಾಡುತ್ತೇವೆ. ಆ ಸಂದರ್ಭಗಳಲ್ಲಿ ಹಿರಿಯರು ಕೈ ಹಿಡಿದು ಮಾರ್ಗದರ್ಶನ ಮಾಡಿದ್ದಾರೆ. ಈಗಲೂ ಅಷ್ಟೇ ತಿಳಿದೊ, ತಿಳಿಯದೆಯೋ ಏನಾದರೂ ಲೋಪಗಳು ಆದರೆ ಈ ಮಹಾಮನೆಯ ಎಲ್ಲ ಸಹೋದರ, ಸಹೋದರಿಯರು ನನ್ನ ಜತೆ ನಿಂತು ಕೈ ಹಿಡಿದು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನ್ನದು.

• ಈ ಸ್ಥಾನದಲ್ಲಿ ಕುಳಿತ ಘಟಾನುಘಟಿ ನಾಯಕರನ್ನು ನೋಡಿದಾಗ ಅವರಂತೆ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವೇ ಎಂಬ ಆತಂಕ ಎದುರಾದರೂ ಪಕ್ಷ ಕಲಿಸಿರುವ ಹೊಣೆಗಾರಿಕೆ, ಕರ್ತವ್ಯ, ಸಂಘ ಪರಿವಾರದ ಮಾರ್ಗದರ್ಶನ ಮತ್ತು ಸಾರ್ವಜನಿಕ ಬದುಕಿನ ಅನುಭವಗಳು ಈ ಸ್ಥಾನದ ಘನತೆಗೆ ಚ್ಯುತಿ ಉಂಟಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂಬ ವಿಶ್ವಾಸ ಧೈರ್ಯ ನೀಡಿವೆ.

• ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು ಸೇರಿದಂತೆ ಕರುನಾಡಿನ ಗುರು ಪರಂಪರೆ ತೋರಿರುವ ಬೆಳಕಿನ ದೊಂದಿ ಹಿಡಿದು ಪ್ರತಿಪಕ್ಷ ಸ್ಥಾನದಲ್ಲಿ ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳುತ್ತಾ ಮತ್ತೊಮ್ಮೆ ಈ ಅವಕಾಶ ನೀಡಿದ ಎಲ್ಲ ಚೇತನಗಳಿಗೂ ನಮಸ್ಕರಿಸಿ, ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಕೋರಿ ನನ್ನ ಚೊಚ್ಚಲ ಮಾತುಗಳಿಗೆ ವಿರಾಮ ನೀಡುತ್ತೇನೆ.

• ಎಲ್ಲರಿಗೂ ನಮಸ್ಕಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!