ಬೆಂಗಳೂರು : ಪಿಡಿಒಗಳು ಶಾಸಕರಿಗಿಂತ ಉನ್ನತ ದರ್ಜೆಯವರಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಗ್ರಾಮ ಪಂಚಾಯತ್‍ಗಳಲ್ಲಿ ಸಮರ್ಪಕವಾಗಿ ತೆರಿಗೆಯನ್ನು ಸಂಗ್ರಹಿಸುತ್ತಿಲ್ಲ. ಒಂದು ವೇಳೆ ಸಮರ್ಪಕವಾಗಿ ತೆರಿಗೆಯನ್ನು ಸಂಗ್ರಹಿಸಿದ್ದಲ್ಲಿ, 3ಸಾವಿರ ಕೋಟಿ ರೂ. ರಾಜ್ಯ ಸರಕಾರಕ್ಕೆ ಬರುತ್ತದೆ. ಪಂಚಾಯಿತಿಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವ ಸಲುವಾಗಿ ಪಂಚತಂತ್ರ-2 ತಂತ್ರಾಂಶವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಪಂಚತಂತ್ರ-2ನಲ್ಲಿ ಸಭೆಯ ನಡಾವಳಿ, ಯೋಜನೆಗಳು, ಪಿಡಿಒಗಳ ವಿವರ ಸೇರಿ ಎಲ್ಲವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ಬಾಪೂಜಿ ಕೇಂದ್ರಗಳಲ್ಲಿಯೂ ಪಾರದರ್ಶಕತೆಯನ್ನು ತರಲಾಗುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಾವು ಉತ್ತಮ ವಾತವರಣವನ್ನು ನಿರ್ಮಾಣ ಮಾಡಬೇಕಾಗಿದೆ. ನಮ್ಮ ರಾಜ್ಯವು ವಿಭಿನ್ನತೆಯಿಂದ ಕೂಡಿದ್ದು, ಎಲ್ಲ ಪ್ರದೇಶಗಳಲ್ಲಿ ಆಯಾ ಪರಿಸರಕ್ಕೆ ಅನುಗುಣವಾಗಿ ಅಭಿವೃದ್ಧಿಯನ್ನು ಮಾಡಬಹುದಾಗಿದೆ. ರಾಷ್ಟ್ರಕ್ಕೆ ಮಾದರಿಯಾಗುವ ಉಧ್ಯಮಶೀಲತೆಯನ್ನು ನಮ್ಮ ಸರಕಾರ ರಾಜ್ಯದಲ್ಲಿ ಅನುಷ್ಠಾನ ಮಾಡಲಿದೆ ಎಂದು ಅವರು ಹೇಳಿದರು.
ದುಡಿಯುವ ಮಹಿಳೆಯರಿಗೆ ಉಪಯುಕ್ತವಾಗಲೆಂದು ದುಡಿಯುವ ಸ್ಥಳದಲ್ಲಿಯೇ ಕೂಸಿನ ಮನೆಗಳನ್ನು ತೆರೆಯಲಾಗುತ್ತದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಜಾರಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.