ಅಯೋಧ್ಯೆ : ಇಂದು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದ್ದಾರೆ.
ಇಂದು ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ 10.45ರ ಸುಮಾರಿಗೆ ರಾಮಜನ್ಮ ಭೂಮಿ ಅಯೋಧ್ಯೆ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಾಲುಹೊದಿಸಿ ಪ್ರಧಾನ ಮಂತ್ರಿಯನ್ನು ಸ್ವಾಗತ ಕೋರಿದ್ದಾರೆ.
ಬಳಿಕ ಅಯೋಧ್ಯೆಯಲ್ಲಿ 1.5 ಕಿ.ಮೀ ಮೋದಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸಾಗರೋಪಾದಿಯಲ್ಲಿ ಜನರು ಆಗಮಿಸಿ ಮೋದಿಯತ್ತ ಕೈ ಬೀಸುತ್ತ ಜೈ ಶ್ರೀರಾಮ್ ಜೈ ಹನುಮಾನ್ ಎಂದು ಘೋಷಣೆಯನ್ನು ಕೂಗುತ್ತಿದ್ದಾರೆ. ರೋಡ್ ಶೋ ಬಳಿಕ ಅಯೋಧ್ಯಾ ಧಾಮ್ ರೈಲ್ವೆʼ ನಿಲ್ದಾಣ ಉದ್ಘಾಟಿಸಿದ್ದಾರೆ. ಬಳಿಕ ಅಯೋಧ್ಯೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದ್ದಾರೆ.
ವಿಮಾನ ನಿಲ್ದಾಣವು 2200 ಮೀಟರ್ ಉದ್ದದ ರನ್ ವೇ ಹೊಂದಿದೆ ಮತ್ತು A-321 ಮಾದರಿಯ ವಿಮಾನಗಳಿಗೆ ಸೂಕ್ತವಾಗಿದೆ. ಎರಡು ಲಿಂಕ್ ಟ್ಯಾಕ್ಸಿವೇಗಳು ಮತ್ತು ಗ್ರೌಂಡ್ ಸಪೋರ್ಟ್ ಎಕ್ವಿಪ್ಮೆಂಟ್ ಏರಿಯಾ ಜೊತೆಗೆ ಎಂಟು A321 ಗಳನ್ನು ಪಾರ್ಕಿಂಗ್ ಮಾಡಲು ಸೂಕ್ತವಾದ ಏಪ್ರನ್ ಅನ್ನು ಸಹ ನಿರ್ಮಿಸಲಾಗಿದೆ.
6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡವು 600 ಪೀಕ್-ಅವರ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದ್ದು, ವಾರ್ಷಿಕ 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಂತ 2 ರ ಅಡಿಯಲ್ಲಿ, 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ, ಇದು ಪೀಕ್ ಸಮಯದಲ್ಲಿ 4,000 ಪ್ರಯಾಣಿಕರಿಗೆ ಮತ್ತು ವಾರ್ಷಿಕವಾಗಿ 60 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.