ಬೆಂಗಳೂರು : ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಜೆಡಿಎಸ್(JDS) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.
ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮೆರಾ ಅಂತೀರಾ ಎಂದು ಉಡುಪಿ ವೀಡಿಯೋ ಪ್ರಕರಣ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ (BJP) ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಗರಿಗೆ ವೋಟ್ ಬ್ಯಾಂಕ್. ಮಧ್ಯದಲ್ಲಿ ಶಿಕಾರಿ ನಾವು. ಇಬ್ಬರೂ ನಮ್ಮನ್ನು ತೋರಿಸಿ ವೋಟು ಮಾಡಿದರು. ಭಯೋತ್ಪಾದನೆ ಶುರುವಾಗುತ್ತಿದೆ ಎನ್ನುವುದೇ ಇವರಿಗೆ ಲೋಕಸಭಾ ವಿಷಯವಾಗಿದೆ. ಮಣಿಪುರದಲ್ಲಿ ಸುಡುತ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮೆರಾ ಎನ್ನುತ್ತಿದ್ದೀರಾ ಎಂದು ಬಿಜೆಪಿ (BJP) ಯನ್ನು ತರಾಟೆಗೆ ತೆಗೆದುಕೊಂಡರು.
ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಬಗ್ಗೆ ತನ್ವೀರ್ ಸೇಠ್ ಪತ್ರದ ವಿಚಾರವಾಗಿ ಮಾತನಾಡಿ, ನ್ಯಾಯಾಂಗ ತನಿಖೆ ಆಗಬೇಕು. ಇದು ಮತೀಯ ಗಲಭೆಯಲ್ಲ ಎಂದು ವರದಿ ಬಂದಿತ್ತು. ಎರಡು ತಂಡಗಳು ಡ್ರಗ್ಸ್ ಮಾಫಿಯಾ ನಡೆಸುತ್ತಿತ್ತು. ಡ್ರಗ್ಸ್ ಮಾರಾಟ ಮಾಡಲು ಆಗದವರು ಆ ದಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂದಿನ ಬಿಜೆಪಿ (BJP) ಸರ್ಕಾರ ಎನ್‍ಐಎ (NIA) ತನಿಖೆಗೆ ಕೊಟ್ಟಿದ್ದರು. ಯಾಕೆ ಅದನ್ನು ಎನ್‍ಐಎ (NIA) ತನಿಖೆಗೆ ಕೊಟ್ಟಿದ್ದು? ಅಲ್ಲೇನಾದರೂ ಕೊಲೆ ನಡೆದಿತ್ತಾ? ಹುಬ್ಬಳ್ಳಿ ವಿಚಾರವನ್ನು ಸಹ ಎನ್‍ಐಎಗೆ ವಹಿಸಿದ್ದೀರಿ. ಹುಬ್ಬಳ್ಳಿಯಲ್ಲಿ ಎಸ್‍ಪಿಗೆ ಧಿಕ್ಕಾರ ಕೂಗಿದರೆ ಕೇಸ್ ಹಾಕಲಾಗಿದೆ. ಗೃಹ ಸಚಿವರು ಇದನ್ನು ನ್ಯಾಯಾಂಗ ತನಿಖೆ ಮಾಡಿಸಲಿ. ತಪ್ಪು ಎಂದು ಗೊತ್ತಾದರೆ ಗಲ್ಲಿಗೆ ಹಾಕಲಿ. ಈಗ ಅಮಾಯಕರನ್ನ ಒಳಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಉರುಳಿಸಲು ಮಾಜಿ ಸಿಎಂ ಕುಮಾರಸ್ವಾಮಿಯವರು ಸಿಂಗಪೂರ್‌ನಲ್ಲಿ ತಯಾರಿ ನಡೆಸಿದ್ದಾರೆ ಎಂಬುದು ಕಾಂಗ್ರೆಸ್‍ನವರ ಊಹೆ. ಕುಮಾರಸ್ವಾಮಿಯವರು ಕುಟುಂಬದ ಜೊತೆಗೆ ಸಿಂಗಾಪೂರ್‌ಗೆ ತೆರಳಿದ್ದಾರೆ. ಕಾಂಗ್ರೆಸ್‍ನವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಇವರಿಗೆ ಸರ್ಕಾರ ನಡೆಸಲು ಆಗುತ್ತಿಲ್ಲ. ಅದಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆದರು.
ಬಿಜೆಪಿ ಪತ್ರದಲ್ಲಿ ಹೆಚ್ಡಿ ಕುಮಾರಸ್ವಾಮಿ ಸಹಿ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಪರಸ್ಪರವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದಾರೆ ಅಷ್ಟೇ. ಜನತಾದಳ ಮಣ್ಣಿನ ಪಕ್ಷ, ನಾವು ಏನಾದ್ರೂ ಮಾಡಿದ್ರೆ ಹೇಳ್ತೀರಾ. ಮಮತಾ, ನಿತೀಶ್ ಇಬ್ಬರೂ ಬಿಜೆಪಿ (BJP) ಜೊತೆಗೆ ಹೋಗಿ ಬಂದವರೇ ಎಂದರು.