ಬೆಂಗಳೂರು : ಈ ಕಾಮಗಾರಿ ಶುರು ಮಾಡಿ ಅದೆಷ್ಟೋ ವರ್ಷಗಳೇ ಕಳೆದಿವೆ. ಹೀಗಿದ್ರೂ ಕಾಮಗಾರಿ ಮಾತ್ರ ಅರ್ಧಂಬರ್ದ. ಕಾಮಗಾರಿಯ ಜಾಗ ಈಗ ಕುಡುಕರದ್ದೇ ಅಡ್ಡ ಆಗಿ ಬಿಟ್ಟಿದೆ. ಅಷ್ಟೇ ಅಲ್ಲದೇ ವಾಹನ ಸಂಚಾರ ಆಗಬೇಕಿದ್ದ ಕಡೆ ಡಂಪಿಗ್ ಯಾರ್ಡ್ ಆಗೋಗಿದೆ. ಅಷ್ಟಕ್ಕೂ ಯಾವದು ಆ ಕಾಮಗಾರಿ. ಅಲ್ಲಿ ಆಗ್ತಿರೋದಾದ್ರೂ ಏನು. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..
ವಾಹನ ದಟ್ಟಣೆ ಕಡಿಮೆ ಮಾಡೋಕೆ ಅಂತ ಬಿಬಿಎಂಪಿ ಅಂಡರ್ ಪಾಸ್ ನಿರ್ಮಾಣ ಮಾಡೋಕೆ ರೆಡಿಯಾಗಿತ್ತು. ಕಾಮಗಾರಿ ಏನೋ ಆರಂಭವೂ ಆಯ್ತು.. ಆದ್ರೆ ವರ್ಷಗಳೇ ಕಳೆದ್ರೂ ಅಲ್ಲಿ ವಾಹನ ಓಡಾಟವೇ ಇಲ್ಲ. ಇದಕ್ಕೆ ಕಾರಣ ಅರ್ಧಂಬರ್ದ ಕಾಮಗಾರಿ. ಎಲ್ಲೆಂದರಲ್ಲಿ ಮಧ್ಯಪಾನದ ಬಾಟಲ್, ರಾಶಿ ರಾಶಿ ಕಸ.. ಬಲು ಉತ್ಸಾಹದಿಂದ ಆರಂಭವಾಗಿದ್ದ ಕಾಮಗಾರಿಗೆ ಯಾಕೋ ಉಸಿರೇ ನಿಂತು ಹೋಗಿದೆ.
ಹೌದು.. ಕಂಠೀರವ ಸ್ಟುಡಿಯೋ ಬಳಿ ಅಂಡರ್ ಪಾಸ್ ಕಾಮಗಾರಿ ಅರ್ಧಕ್ಕೇ ನಿಲ್ಲಿಸಲಾಗಿದೆ. ಕಾಮಗಾರಿ ಸ್ಟಾಪ್ ಆಗಿ ವರ್ಷಗಳೇ ಕಳೆದಿದೆ. ಈ ಅಂಡರ್ ಪಾಸ್ ರೆಡಿಯಾಗಿದ್ದಿದ್ದರೆ ರಾಜಾಜಿನಗರ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್ ಮತ್ತು ಕುರುಬರಹಳ್ಳಿಯ ನಿವಾಸಿಗಳಿಗೆ ತುಮಕೂರಿನತ್ತ ರಸ್ತೆಯಲ್ಲಿ ಸಲೀಸಾಗಿ ಓಡಾಡಬಹುದಿತ್ತು. ಆದ್ರೆ ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡಿ ಮಾಡಿದ್ದ ಕಾಮಗಾರಿ ಮಾತ್ರ ಕುಡುಕರ ಅಡ್ಡೆಯಾಗಿದೆ. ನಂದಿನಿ ಲೇಔಟ್ ಮತ್ತು ಪೀಣ್ಯ ನಡುವೆ ಸಂಪರ್ಕ ಕಲ್ಪಿಸಲು 2014 ರಲ್ಲಿ ಆರಂಭಗೊಂಡಿತ್ತು. ಅಂಡರ್ ಪಾಸ್‌ಗೆ ಸಂಬಂಧಿಸಿದ ಲ್ಯಾಂಡ್ ಸಮಸ್ಯೆಯಿಂದ ಅರ್ಧಕ್ಕೇ ನಿಲ್ಲಿಸಿ ಗೋಡೆ ನಿಲ್ಲಿಸಲಾಗಿತ್ತು. ಸದ್ಯ ಈ ಸಮಸ್ಯೆ ಬಗೆಹರಿದಿದೆ. ಆದ್ರೂ ಕಾಮಗಾರಿ ಯಾವುದೇ ದಡ ತಲುಪುತ್ತಿಲ್ಲ.
ಈ ಅರ್ಧಂಬರ್ಧ ಕಾಮಗಾರಿಯಾಗಿರೋ ಅಂಡರ್ ಪಾಸ್ ಸದ್ಯ ಕುಡುಕರಿಗೆ ಪಾರ್ಟಿ ಮಾಡಲು ಒಳ್ಳೆ ಸ್ಪಾಟ್ ಆಗಿದೆ. ಸಂಜೆಯಾದ್ರೆ ಸಾಕು ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಓಡಾಡೋಕು ಜನ ಭಯ ಪಡುವ೦ತಾಗಿದೆ. ಎಲ್ಲೆಂದರಲ್ಲಿ ಮಧ್ಯಪಾನದ ಬಾಟಲ್, ರಾಶಿ ಗಟ್ಟಲೇ ಕಸ ತಂದು ಅಲ್ಲೇ ಸುರಿಯುತ್ತಿದ್ದಾರೆ. ಸ್ವಲ್ಪ ಖಾಲಿ ಜಾಗ ಸಿಕ್ರೆ ಸಾಕು ಅಂತ ಕಸ ಹಾಕಿದ್ದೆ ಹಾಕಿದ್ದು. ಸದ್ಯ ಈ ಜಾಗ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಇನ್ನು ಅಂಡರ್ ಪಾಸ್ ಗೆ ಅಡ್ಡಲಾಗಿ ಇರುವ ಗೋಡೆಯಿಂದ ಚರಂಡಿ ನೀರು ಹರಿಯುತ್ತಿದೆ. ಇದರಿಂದ ಗಬ್ಬು ವಾಸನೆಯಿಂದ ವಾಹನ ಸವಾರರು ಕಷ್ಟ ಪಡುವಂತಾಗಿದೆ. ಹೀಗಾಗಿ ಬಿಬಿಎಂಪಿಯ ಬೇಜವಾಬ್ದಾರಿಗೆ ಜನ ಕಿಡಿ ಕಾರುತ್ತಿದ್ದಾರೆ. ಇನ್ನು ಪಕ್ಕದಲ್ಲೇ ಬಸ್ ನಿಲ್ದಾಣ ಇದ್ದು ಅಲ್ಲಿ ಮಹಿಳೆಯರು ಸಂಜೆ ಸಮಯದಲ್ಲಿ ಓಡಾಡೋಕೆ ಭಯ ಪಡ್ತಾರೆ.
ಅದೇನೇ ಇರಲಿ ಬೆಂಗಳೂರಿನಲ್ಲಿ ಪೀಕ್ ಅವರ್ ನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಈ ಅಂಡರ್ ಪಾಸ್ ಕಾಮಗಾರಿಯನ್ನು ಮತ್ತೆ ಆರಂಭಿಸಿ, ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗೆ ಮುಕ್ತಾಯ ನೀಡಲು ಆಸಕ್ತಿ ತೋರಿಸಬೇಕಿದೆ.
ವರದಿ : ಹರ್ಷಿತಾ ಪಾಟೀಲ್